ಶಕ್ತಿ ಯೋಜನೆಯಿಂದ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಳ
ಪ್ರಧಾನಿ ಮೋದಿ ಅವರ ಆಧಾರರಹಿತ ಟೀಕೆಗೆ ಉತ್ತರ: ರಾಮಲಿಂಗಾ ರೆಡ್ಡಿ
ಬೆಂಗಳೂರು: ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಉಚಿತ ಪ್ರಯಾಣ ಮಹಿಳಾ ಸಬಲೀಕರಣದ ಜತೆಗೆ ರಾಜ್ಯದ ಜಿಎಸ್ಟಿ ಸಂಗ್ರಹವನ್ನು ಹೆಚ್ಚಿಸಲಿದೆ ಎನ್ನುತ್ತಿವೆ ವರದಿಗಳು.
ಆರ್ಥಿಕ ಆಯೋಗದ ವರದಿಯ ಪ್ರಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ವಿವಿಧ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದರಿಂದ ಉತ್ಪಾದನೆ ಹೆಚ್ಚಾಗುತ್ತಿದೆ. ಈ ಉತ್ಪಾದನೆಯ ಕೊಂಡು-ಕೊಳ್ಳುವಿಕೆಯಿಂದ ರಾಜ್ಯದಲ್ಲಿ 2024-25 ನೇ ಸಾಲಿನಲ್ಲಿ ಸುಮಾರು 371.57 ಕೋಟಿ ಜಿಎಸ್ಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಿದೆ.
ಶಕ್ತಿ ಯೋಜನೆಯಿಂದ ಮಹಿಳೆಯರ ತಲಾ ಆದಾಯ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಮಾಸಿಕ 1326 ರು.ಉಳಿತಾಯ ಮಾಡಿದರೆ, ಹಾವೇರಿಯಲ್ಲಿ 1015 ರು. ಉಳಿತಾಯ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ 779, ಯಾದಗಿರಿಯಲ್ಲಿ 784 ಮತ್ತು ಉಡುಪಿಯಲ್ಲಿ 681 ರು.ಗಳ ಉಳಿತಾಯ ಮಾಡುತ್ತಿದ್ದಾರೆ.
ಈ ಉಳಿತಾಯ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಚಲನೆಯನ್ನು ಹೆಚ್ಚಿಸಿದ್ದು, ಅದರಿಂದ ಜಿಎಸ್ಟಿ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಶಕ್ತಿ ಯೋಜನೆಗಾಗಿ ಸರಕಾರ ಬಜೆಟ್ನಲ್ಲಿ 2024-25 ನೇ ಸಾಲಿಗಾಗಿ, 5015 ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಹೀಗಾಗಿ, ಒಟ್ಟಾರೆ ಶಕ್ತಿ ಯೋಜನೆಯಿಂದಲೇ 371.57 ಕೋಟಿ ಜಿಎಸ್ಟಿ ಸಂಗ್ರಹ ಹೆಚ್ಚಳವಾಗುವ ನಿರೀಕ್ಷೆ ಇಡಲಾಗಿದೆ.
ಶಕ್ತಿ ಯೋಜನೆ 2023 ರ ಜೂನ್ನಲ್ಲಿ ಆರಂಭವಾಗಿದ್ದು, 2024 ರ ಮಾರ್ಚ್ 31 ರವರೆಗೆ 182.07 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರ ಟಿಕೆಟ್ ಮೌಲ್ಯ 4380.37 ಕೋಟಿ ರು.ಆಗಿದೆ. ಈ ಮೊತ್ತವೂ ಸೇರಿ, ಈ ಒಂದು ವರ್ಷದ ಅವಧಿಯಲ್ಲಿ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಚಲನೆಯಿಂದ ಸುಮಾರು 309.64 ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.
