ರಾಜಕೀಯ ಸುದ್ದಿ

ಎಚ್.ಆಂಜನೇಯಗೆ ಪರಿಷತ್‌ ಸ್ಥಾನ: ಬೆಂಬಲಿಗರ ಪ್ರತಿಭಟನೆ

Share It

ಬೆಂಗಳೂರು: ವಿಧಾನ ಪರಿಷತ್‌ಗೆ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ, ಅವರ ಬೆಂಬಲಿಗರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಚ್. ಆಂಜನೇಯ ಅಭಿಮಾನಿಗಳು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಎಚ್.ಆಂಜನೇಯ, ಯುವ ಕಾಂಗ್ರೆಸ್‌ನಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಪಕ್ಷ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಸಿಎಂ ನಿವಾಸದ ಮುಂದಿನಿಂದ ತೆರವುಗೊಳಿಸಲು ಪೊಲೀಸರು ಪ್ರಯತ್ನ ನಡೆಸಿದರಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದವರೆಗೆ ಕಾಯುವುದಾಗಿ ಪಟ್ಟುಹಿಡಿದ ಕಾರ್ಯಕರ್ತರು, ದಲಿತ ಎಡಗೈ ಸಮುದಾಯದ ಪ್ರಮುಖ ನಾಯಕರಾಗಿರುವ ಆಂಜನೇಯ ಅವರಿಗೆ ಅನ್ಯಾಯ ಮಾಡಿದರೆ, ಇಡೀ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.

ಎಚ್.ಆಂಜನೇಯ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಪಕ್ಷ ಸಂಘಟನೆ ಮತ್ತು ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಅವರು ಗುರುತಿಸಿಕೊಂಡಿದ್ದು, ಅವರಿಗೆ ಪರಿಷತ್ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ನಿಟ್ಟಿನಲ್ಲಿಯೇ ಕಸರತ್ತು ನಡೆಸುತ್ತಿರುವ ಎಚ್.ಆಂಜನೇಯ ಅವರು, ಈಗಾಗಲೇ ದೆಹಲಿಯಲ್ಲಿ ಬೀಟುಬಿಟ್ಟಿದ್ದು, ಪಕ್ಷದ ನಾಯಕರನ್ನು ಭೇಟಿ ಮಾಡಿ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರ ಬೆಂಬಲಿಗರು ಪ್ರತಿಭಟನೆ ನಡೆಸುವ ಮೂಲಕ ಆಂಜನೇಯ ಅವರಿಗೆ ಪರಿಷತ್ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.


Share It

You cannot copy content of this page