-ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
BMTC ಇಲೆಕ್ಟ್ರಿಕ್ ಬಸ್ ಗಳಲ್ಲಿ ಕನ್ನಡಿಗರ ಬದಲು ಕೇರಳದ ಯುವಕರಿಗೆ ಅವಕಾಶ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೋಶಿ ಟ್ವೀಟ್ ಮಾಡಿದ್ದಾರೆ.
ಕೇರಳದ ಯುವಕರಿಗೆ BMTC ಚಾಲಕ ಹುದ್ದೆಗೆ ಅವಕಾಶ ಕಲ್ಪಿಸುವ ಮೂಲಕ ಕನ್ನಡಿಗರಿಗೆ ಪಂಗನಾಮ ಹಾಕುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಕೇರಳದವರನ್ನು ನೇಮಿಸಿಕೊಳ್ಳುವುದೇಕೆ? ಕನ್ನಡಿಗರು ಯಾರೂ ಸಿದ್ಧರಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಏಜೆನ್ಸಿ ಮೂಲಕ ನೇಮಕವಾದದ್ದು ಎಂಬುದು ಬರಿಯ ಸಬೂಬು. ಕಾಂಗ್ರೆಸ್ ಯುವನಿಧಿ ಗ್ಯಾರಂಟಿಯ ಹಕೀಕತ್ತು ಇದೇ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನಿಷ್ಠೆ ಕರ್ನಾಟಕ ಅಥವಾ ಕನ್ನಡಿಗರ ಪರವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಮತ ಹಾಕಲು ಕನ್ನಡಿಗರೇ ಬೇಕು, ಆದರೆ ನಿಯತ್ತು ಮಾತ್ರ ಪರರ ಪರ ಎಂದು ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.