ಬೆಂಗಳೂರು: ನಾಳೆ ಬೆಳಗ್ಗೆ 10 ಗಂಟೆ ವೇಳೆಗೆ ಎಸ್ಐಟಿ ಮುಂದೆ ಹಾಜರಾಗಲೇಬೇಕಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ಇಂದು ಜರ್ಮನಿಯಿಂದ ವಿಮಾನ ಹತ್ತಿದ್ದಾರೆ.
ರೇವಣ್ಣ ಶರಣಾಗಲು ಬರುತ್ತಾರೆ ಎನ್ನುತ್ತಿದ್ದಂತೆ ಅವರು ಎಲ್ಲಿದ್ದಾರೆ. ಎಲ್ಲಿಂದ ಬರುತ್ತಾರೆ? ಯಾವ ಮಾರ್ಗದಲ್ಲಿ ಬರುತ್ತಾರೆ ಎಂಬೆಲ್ಲ ಪ್ರಶ್ನೆಗಳು ಮೂಡಿದ್ದವು. ಅಷ್ಟಕ್ಕೂ ಅವರು ದುಬೈನಲ್ಲಿದ್ದಾರೆ ಎಂಬ ಮಾಹಿತಿಗಳು ಕೂಡ ಹರಿದಾಡಿದ್ದವು. ಇದೆಲ್ಲದಕ್ಕೂ ಇದೀಗ ತೆರೆಬಿದ್ದಿದ್ದು, ಜರ್ಮನಿಯ ಮ್ಯಾನಿಚ್ ನಗರದಿಂದ ಬೆಂಗಳೂರಿಗೆ ಹೊರಡುವ ವಿಮಾನಕ್ಕೆ ಪ್ರಜ್ವಲ್ ಹೆಸರಿನಲ್ಲಿ ಟಿಕೆಟ್ ಬುಕ್ ಆಗಿರುವುದು ಕಂಡು ಬಂದಿದೆ.
ಪ್ರಜ್ವಲ್ ಹೆಸರಿನಲ್ಲಿ ಬುಕ್ ಆಗಿರುವ ಟಿಕೆಟ್ ಇದೀಗ ವೈರಲ್ ಆಗಿದ್ದು, ಅವರು ಮಧ್ಯಾಹ್ನ ಮೂರು ಗಂಟೆಯ ವಿಮಾನಕ್ಕೆ ಮ್ಯಾನಿಚ್ ನಗರದಿಂದ ಹೊರಟಿದ್ದಾರೆ. ಆ ವಿಮಾನ ರಾತ್ರಿ 12.30 ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಹೀಗಾಗಿ, ಎಸ್ಐಟಿ ಅಧಿಕಾರಿಗಳು ವಿಮಾನ ನಿಲ್ದಾಣ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಹದಿನೈದು ದಿನದ ಹಿಂದೆಯೇ ಪ್ರಜ್ವಲ್ ರೇವಣ್ಣ ಹೆಸರಲ್ಲಿ ಟಿಕೆಟ್ ಬುಕ್ ಆಗಿತ್ತು. ಆದರೆ, ಪ್ರಜ್ವಲ್ ವಿಮಾನ ಹತ್ತದೆ ಆಟವಾಡಿಸಿದ್ದರು. ಇದೀಗ ಟಿಕೆಟ್ ಬುಕ್ ಆದರೂ, ಅವರು ವಿಮಾನ ಏರುವವರಿಗೆ ನಂಬಿಕೆ ಇರಲಿಲ್ಲ. ಆದರೆ, ವಿಮಾನಕ್ಕೆ ಬೋರ್ಡಿಂಗ್ ಆಗಿರುವ, ಲಗೇಜ್ ಪಾಸ್ ಮಾಹಿತಿ ಸಿಗುತ್ತಿದ್ದಂತೆ, ಅವರು ವಿಮಾನ ಏರಿರುವುದು ಖಚಿತವಾಗಿದೆ. ಹೀಗಾಗಿ, ಅವರ ಬಂಧನಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಎಸ್ಐಟಿ ಮಾಡಿಕೊಳ್ಳುತ್ತಿದೆ.
ಪ್ರಜ್ವಲ್ ಬರುತ್ತಿದ್ದಂತೆ ಆತನನ್ನು ವಶಕ್ಕೆ ಪಡೆಯಲು ಎಸ್ಐಟಿ ಸಿದ್ಧತೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ಪೊಲೀಸರ ಭದ್ರತೆ ಕೋರಿದೆ. ವಿಮಾಣ ನಿಲ್ದಾಣಕ್ಕೆ ಜೆಡಿಎಸ್ ಕಾರ್ಯಕರ್ತರು ದಾಂಗುಡಿಯಿಡುವ ಸಾಧ್ಯತೆಯಿದ್ದು, ಅವರು ಬಂಧನ ವೇಳೆ ಏನಾದರೂ, ಗಲಭೆ ಸೃಷ್ಟಿಸಬಹುದು ಎಂಬ ಮಾಹಿತಿ ಮೇರೆಗೆ ಪೊಲೀಸರ ಸಹಕಾರ ಕೋರಿದ್ದಾರೆ. ಪಲಲೀಸ್ ಭದ್ರತೆಯೊಂದಿಗೆ ಪ್ರಜ್ವಲ್ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಮಾಡಲು ಎಸ್ಐಟಿ ಸಿದ್ಧತೆ ನಡೆಸಿದೆ.