ಅಪರಾಧ ರಾಜಕೀಯ ಸುದ್ದಿ

ಚಕ್ರಾಧಿಪತ್ಯದ ಚಳಿಬಿಡಿಸಿದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ !

Share It


ಹಾಸನ: ಹಾಸನ ಎಂದರೆ ತಮ್ಮದೇ ಜಹಾಗೀರು ಎಂಬಂತ ಮನಸ್ಥಿತಿಯಲ್ಲಿರುವ ಜೆಡಿಎಸ್ ನಾಯಕರ ಚಳಿ ಬಿಡಿಸುವಲ್ಲಿ ಇಂದಿನ ಪ್ರಗತಿಪರ ಹೋರಾಟ ಯಶಸ್ವಿಯಾಗಿದೆ ಎನ್ನಬಹುದು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ನೊಂದ ಹೆಣ್ಣುಗಳ ಪರ ನಿಲ್ಲುವ ಉದ್ದೇಶದೊಂದಿಗೆ ಆಯೋಜಿಸಿದ್ದ ಬೃಹತ್ ಹೋರಾಟ ಯಶಸ್ವಿಯಾಗಿದೆ. ಹಣವಿದ್ದವರು, ಏನನ್ನೂ ಬೇಕಾದರೂ ಜಯಿಸಿಕೊಳ್ಳಬಹುದು ಎಂಬ ಭಾವನೆ ಮೂಡಿದ್ದ ಹಾಸನದಲ್ಲಿ ಇದೀಗ ಭರವಸೆಯ ಬೆಳಕು ಮೂಡುವಂತೆ ಮಾಡಿದ ಬೃಹತ್ ಪ್ರತಿಭಟನೆ.

ಪ್ರಜ್ವಲ್ ನಡೆಸುತ್ತಿರುವ ಪುಂಡಾಟದ ಪ್ರಕ್ರಿಯೆಗೆ ದೇವೇಗೌಡರ ಕಾಲದಲ್ಲೇ ಚಾಲನೆ ಸಿಕ್ಕಿತ್ತು ಎನ್ನುತ್ತಾರೆ ಕೆಲ ಹಿರಿಯ ಜೀವಗಳು. ಆದರೆ, ಅವರ ಮಕ್ಕಳು ಅದೇ ಪ್ರವೃತ್ತಿ ಮುಂದುವರಿಸಿ, ಇಡೀ ಹಾಸನವೇ ನಮ್ಮದು ಎಂಬ ಮನೋಭಾವನೆಯಲ್ಲಿ ರಾಜಕೀಯ ಮಾಡುತ್ತಿದ್ದರು. ನಂತರ ಸೊಸೆ ಬಂದ ನಂತರವಂತೂ, ಅವರ ಕುಟುಂಬ ಎದುರಿಸಿ ನಿಲ್ಲುವ ಶಕ್ತಿ ಯಾವ ಅಧಿಕಾರಿಗಾಗಲೀ, ಜನಸಾಮಾನ್ಯನೀಗಾಗಲೀ ಇಲ್ಲದಂತೆ ಆಗಿತ್ತು.

ರಾಜಕೀಯವಾಗಿ ಅವರನ್ನು ಎದುರಿಸುವ ಪ್ರಯತ್ನ ಅಲ್ಲಲ್ಲಿ ಪುಟ್ಟಸ್ವಾಮೀಗೌಡ, ಪ್ರೀತಂ ಗೌಡ, ಇತ್ತೀಚೆಗೆ ಶ್ರೇಯಸ್ ಪಟೇಲ್ ಅಂತಹ ಕೆಲವರು ಮಾಡಿದ್ದು ಬಿಟ್ಟರೆ, ಗೌಡರ ಕುಟುಂಬದವರು ಆಡಿದ್ದೇ ಆಟ ಹೂಡಿದ್ದೇ ಲಗ್ಗೆ ಎಂಬಂತಾಗಿತ್ತು. ಈ ಚಕ್ರಾಧಿಪಥ್ಯದ ಫಲವೇ ಪ್ರಜ್ವಲ್ ರೇವಣ್ಣ ಎಂಬ ದೇವೇಗೌಡರ ಕರುಳಿನ ಕುಡಿ, ಎಲ್ಲಿ ಬೇಕಲ್ಲಿ, ಯಾವ ಮನೆಯ ಹೆಣ್ಣು ಮಕ್ಕಳು ಬೇಕು ಅವರನ್ನೇ ಬಳಸಿ ಬಿಸಾಡಿದ್ದು.

ಇದೀಗ ಸಿಕ್ಕಸಿಕ್ಕ ಹೆಣ್ಣುಮಕ್ಕಳ ವಿಡಿಯೋ ಮಾಡಿ, ಅದನ್ನು ಹಾದಿ ಬೀದಿಯಲ್ಲಿ ಹಂಚಲಾಗಿದೆ. ಇದು ರಾಜಕೀಯ ಷಡ್ಯಂತ್ರವೆಂಬ ಹಳಸಲು ಡೈಲಾಗ್ ಹೊಡೆಯುತ್ತಾರೆ. ಆದರೆ, ಆ ವಿಡಿಯೋದಲ್ಲಿರುವ ನೊಂದ ಹೆಣ್ಣು ಮಕ್ಕಳ ಕತೆಯೇನು? ಅವರಿಗೆ ನಾವಿದ್ದೇವೆ ಎಂಬ ಸಾಂತ್ವನ ಹೇಳುವವರು ಯಾರು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವೆಂಬತಿತ್ತು ಇಂದಿನ ಪ್ರಗತಿಪರ ಹೋರಾಟ.

ಮಹಿಳಾಪರ ಹೋರಾಟಗಾರರು, ಸಾಹಿತಿಗಳು ಹೆಣ್ಣು ಮಕ್ಕಳ ಕಣ್ಣಿರಿಗೆ ದನಿಯಾಗುವಂತೆ ಕೂಗಿ ಹೇಳಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಹೆಣ್ಣಿನ ಕಣ್ಣಲ್ಲಿ ನೀರಾಕಿಸಿದವರ ಎಡೆಮುರಿ ಕಟ್ಟದಿದ್ದರೆ ನಿಮ್ಮ ಪೊಲೀಸ್ ವ್ಯವಸ್ಥೆಗೊಂಡು ದಿಕ್ಕಾರ ಎಂದರು. ಹೆಣ್ಣಿನ ಮೈ ಮುಟ್ಟಿದ ಮೇಲೆ ನಿಮ್ಮ ಚಕ್ರಾಧಿಪತ್ಯದ ಅಂತ್ಯ ಆರಂಭವಾಯಿತು ಎಂಬ ಎಚ್ಚರಿಕೆಯನ್ನು ಪ್ರತಿಭಟನೆ ಮೂಲಕ ರವಾನಿಸಲಾಯಿತು.


Share It

You cannot copy content of this page