ಅಪರಾಧ ರಾಜಕೀಯ ಸುದ್ದಿ

ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಕೇಸ್: ಕೊನೆಗೂ ಪ್ರಜ್ವಲ್ ರೇವಣ್ಣ ಅರೆಸ್ಟ್

Share It

ಬೆಂಗಳೂರು: 35 ದಿನಗಳ ಕಣ್ಣಾಮುಚ್ಚಾಲೆ ಆಟ ಇವತ್ತಿಗೆ ಅಂತ್ಯವಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಇಷ್ಟು ದಿನ ವಿದೇಶದಲ್ಲಿ ತಲೆಮರಿಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಐಎಬಿ ವಿಮಾನ ನಿಲ್ದಾಣಕ್ಕೆ ಆರೋಪಿ ಬಂದಿಳಿಯುತ್ತಿದ್ದಂತೆ ಪೊಲೀಸ್‌ ಪಡೆ ಅಲರ್ಟ್ ಆಗಿದ್ದು, ನೇರವಾಗಿ ಜೀಪ್‌ ಹತ್ತಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್ಐಟಿ, ಕೆಐಎಬಿ ಹಿಂದಿನ ಗೇಟ್ ಮೂಲಕ ಕರೆದೊಯ್ದಿದ್ದಾರೆ. ಏರ್​ಪೋರ್ಟ್​ನಿಂದ ಬೆಂಗಳೂರಿನ ಎಸ್ಐಟಿ ಕಚೇರಿಯತ್ತ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇತ್ತ ಸಿಐಡಿ ಕಚೇರಿ ಬಳಿ ಪೊಲೀಸರು ಅಲರ್ಟ್ ಆಗಿದ್ದು, ಇಬ್ಬರು ಇನ್ಸ್ ಪೆಕ್ಟರ್ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿತ್ತು.

ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟಿಸ್ ಇರೋದ್ರಿಂದ ಇಮಿಗ್ರೇಷನ್‌ ಅಧಿಕಾರಿಗಳೇ ಪ್ರಜ್ವಲ್‌ನನ್ನು ಮೊದಲು ವಶಕ್ಕೆ ಪಡೆದುಕೊಂಡಿದ್ದರು. ಅರೆಸ್ಟ್‌ ವಾರಂಟ್‌ ಕೂಡ ಇರೋದ್ರಿಂದ ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಗುರುವಾರ ಮಧ್ಯರಾತ್ರಿಯೇ ಪ್ರಜ್ವಲ್‌ನನ್ನ ವಶಕ್ಕೆ ಪಡೆದಿರುವ ಎಸ್‌ಐಟಿ ನಾಳೆ ಬೆಳಗ್ಗೆ ಆರೋಗ್ಯ ತಪಾಸಣೆ ನಡೆಸಿ ಜಡ್ಜ್‌ ಮುಂದೆ ಹಾಜರುಪಡಿಸಲಿದ್ದು ಬಳಿಕ ತಮ್ಮ ವಶಕ್ಕೆ ಕೇಳಲಿದ್ದಾರೆ.

4 ದಿನಗಳ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್, ಮೇ 31 ಎಂದು ಬೆಳಗ್ಗೆ 10 ಘಂಟೆಗೆ ಎಸ್ಐಟಿ ಮುಂದೆ ಹಾಜರಾಗೋದಾಗಿ ಹೇಳಿದ್ದರು. ಅದರಂತೆ ಕಳೆದ ಗುರುವಾರ ರಾತ್ರಿ ಜರ್ಮನಿಯಿಂದ ವಿಮಾನದಲ್ಲಿ ಬಂದಿದ್ದರು. ಭಾರತೀಯ ಕಾಲಮಾನ ಪ್ರಕಾರ ಗುರುವಾರ ಸಂಜೆ 4 ಗಂಟೆಗೆ ಜರ್ಮನಿಯ ಮ್ಯೂನಿಕ್‌ನಿಂದ ಹೊರಟಿದ್ದ ವಿಮಾನದಲ್ಲಿ ಪ್ರಜ್ವಲ್ ಹತ್ತಿದ್ದರು. 2 ಟ್ರ್ಯಾಲಿ ಬ್ಯಾಗ್‌ ಒಟ್ಟು 4 ಬ್ಯಾಗ್‌ನೊಂದಿಗೆ ಬಂದಿರೋ ಪ್ರಜ್ವಲ್‌, ಗುರುವಾರ ಮಧ್ಯರಾತ್ರಿ 12 ಗಂಟೆ 48 ನಿಮಿಷಕ್ಕೆ ಲ್ಯಾಂಡ್ ಆಗಿತ್ತು.

ಒಟ್ಟಾರೆ ಹೇಗೊ ಸ್ವದೇಶಕ್ಕೆ ವಾಪಸ್ಸಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆ ಮೂಲಕ 24 ದಿನಗಳ ಪ್ರಜ್ವಲ್ ರೇವಣ್ಣನ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ. ಇವತ್ತು ಬರ್ತೀನಿ, ನಾಳೆ ಬರ್ತೀನಿ ಎಂದು ಕಣ್ಣಾಮುಚ್ಚಾಲೆ ಆಟ ಬಂದ್ ಆಗಿದೆ. ಅತ್ಯಾಚಾರ ಆರೋಪಿ ಪ್ರಜ್ವಲ್‌ ನನ್ನು ಕೊನೆಗೂ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಎಸ್​ಐಟಿ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ.

ಈಗಾಗಲೇ ಜನಪ್ರತಿನಿಧಿಗಳ ಕೋರ್ಟ್‌ ಅರೆಸ್ಟ್‌ ವಾರಂಟ್ ಜಾರಿ ಮಾಡಿದ್ದು, ಈ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್ ನನ್ನು ಬಂಧಿಸಲಾಗಿದೆ. ಕೆಐಎಬಿಗೆ ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳಿಂದ ರಾಜತಾಂತ್ರಿಕ ಪಾಸ್‌ಪೋರ್ಟ್‌ ಸೇರಿ ಕೆಲ ದಾಖಲಾತಿಗಳ ಪರಿಶೀಲನೆ ಮಾಡಿ, ಬಳಿಕ ಎಸ್ಐಟಿ ವಶಕ್ಕೆ ಪಡೆದಿದೆ.


Share It

You cannot copy content of this page