ಅಪರಾಧ ರಾಜಕೀಯ ಸುದ್ದಿ

ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ: ಬಂಧನಕ್ಕೆ ಕ್ಷಣಗಣನೆ

Share It

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಕೋರಿ ಭವಾನಿ ರೇವಣ್ಣ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಕೆ.ಆರ್.ನಗರದ ಸಂತ್ರಸ್ತೆಯನ್ನು ಮನೆಯಿಂದ ಕರೆತಂದು, ತೋಟದ ಮನೆಯಲ್ಲಿ ಅಕ್ರಮವಾಗಿ ಕೂಡಿಹಾಕಲಾಗಿತ್ತು. ಆಕೆಯ ಕಿಡ್ನಾಪ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಭವಾನಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲು ಎಸ್ ಐಟಿ ಸಿದ್ಧತೆ ನಡೆಸಿತ್ತು.

ಪ್ರಕರಣದಲ್ಲಿ ಬಂಧನ ತಪ್ಪಿಸಿಕೊಳ್ಳುವ ಸಲುವಾಗಿ ಭವಾನಿ ರೇವಣ್ಣ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ, ಜಾಮೀನು ಸಾಧ್ಯವಿಲ್ಲ ಎಂದಿದೆ. ಈ ಹಿನ್ನಲೆಯಲ್ಲಿ ಭವಾನಿ ರೇವಣ್ಣ ಬಂಧನಕ್ಕೆ ಎಸ್‌ಐಟಿ ಸಿದ್ಧತೆ ನಡೆಸಿದೆ.

ಮನೆಗೆಲಸದ ಮಹಿಳೆಯನ್ನು ಪ್ರಜ್ವಲ್ ರೇವಣ್ಣ ಬಲವಂತವಾಗಿ ಲೈಂಗಿಕ ಶೋಷಣೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಸಂಬಂಧಿಸಿ ಸಂತ್ರಸ್ತೆ ಕಡೆಯಿಂದ ದೂರು ದಾಖಲಾಗಿತ್ತು. ನಂತರ ಆಕೆಯನ್ನು ಕಿಡ್ನಾಪ್ ಮಾಡಿ, ಆಕೆಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿಸುವ ಪ್ರಯತ್ನ ನಡೆದಿತ್ತು. ಈ ವೇಳೆ ಆಕೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಈಗಾಗಲೇ, ಬಾಬು ಎಂಬಾತನನ್ನು ಬಂಧಿಸಲಾಗಿದೆ.

ಆಕೆಯನ್ನು ಕಾರಿನಲ್ಲಿ ಕರೆತಂದ ಆರೋಪದಲ್ಲಿ ಭವಾನಿ ರೇವಣ್ಣ ಕಾರು ಚಾಲಕನ ಮೇಲೆ ಪ್ರಕರಣ ದಾಖಲಾಗಿದ್ದು, ಆತನೂ ತಲೆಮರೆಸಿಕೊಂಡಿದ್ದಾನೆ. ಅದೇ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಜೈಲುಪಾಲಾಗಿ, ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ಭವಾನಿ ರೇವಣ್ಣ ಬಂಧನವಾಗುವುದು ಬಹುತೇಕ ಖಚಿತವಾಗಿದೆ.


Share It

You cannot copy content of this page