ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದು, ಎಸ್ಐಟಿ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದೆ. ಹೀಗಾಗಿ, ಲೈಂಗಿಕ ದೌರ್ಜನ್ಯಕ್ಕೊಳಗಾದವರು ಧೈರ್ಯವಾಗಿ ದೂರು ನೀಡಿ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಕರೆ ನೀಡಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಡಾ. ಜಿ ಪರಮೇಶ್ವರ, ಎಸ್ಐಟಿ ಆರಂಭಿಸಿರುವ ಸಹಾಯವಾಣಿಗೆ ಸುಮಾರು 30 ಕ್ಕೂ ಹೆಚ್ಚು ಕರೆಗಳು ಬಂದಿವೆ. ಆದರೆ, ಅರ್ಯಾರು ಕೂಡ ಮುಂದೆ ಬಂದು ದೂರು ನೀಡಲು ಧೈರ್ಯ ಮಾಡಿಲ್ಲ, ಈವರೆಗೆ ಪ್ರಜ್ವಲ್ ರೇವಣ್ಣನ ಬಂಧನವಾಗಿಲ್ಲದ ಕಾರಣ ಸಂತ್ರಸ್ತೆಯರು ಹೆದರಿದ್ದರು. ಇದೀಗ ಅವರ ಬಂಧನವಾಗಿದ್ದು, ಸಂತ್ರಸ್ತೆಯರು ಧೈರ್ಯವಾಗಿ ಬಂದು ದೂರು ನೀಡಬಹುದು ಎಂದು ಹೇಳಿದ್ದಾರೆ.
ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದವರನ್ನೆಲ್ಲ ಬಂಧನ ಮಾಡಲಾಗಿದೆ. ಕೆಲವರಿಗೆ ನೊಟೀಸ್ ನೀಡಿದ್ದು, ಅವರ ಬಂಧನಕ್ಕೆ ಎಸ್ಐಟಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಮುಖ ಆರೋಪಿ ವಿದೇಶದಲ್ಲಿದ್ದರೂ, ಆತನನ್ನು ದೇಶಕ್ಕೆ ಕರೆಸಿ ಬಂಧಿಸುವಲ್ಲಿ ಎಸ್ಐಟಿ ಯಶಸ್ವಿಯಾಗಿದೆ. ಹೀಗಾಗಿ, ಮುಂದಿನ ತನಿಖೆ ಎಲ್ಲ ಆಯಾಮಗಳಲ್ಲಿ ನಡೆಯಲಿದೆ ಎಂದರು.
ಪ್ರಜ್ವಲ್ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ಬಿಡುಗಡೆಯಾಗಿರುವ ಪೆನ್ ಡ್ರೈವ್ ನಲ್ಲಿ ಸುಮಾರು ಎರಡು ಸಾವಿರ ವಿಡಿಯೋಗಳಿವೆ ಎಂದು ಹೇಳಲಾಗಿದೆ. ಅದರಲ್ಲಿ ನೂರಾರು ಮಹಿಳೆಯರು ಸಂತ್ರಸ್ತೆಯರಾಗಿದ್ದಾರೆ ಎಂಬ ಆರೋಪವಿದೆ. ಈ ನಡುವೆ ಮೂರು ಪ್ರಕರಣ ಮಾತ್ರವೇ ದಾಖಲಾಗಿದ್ದು, ಇನ್ನುಳಿದ ಸಂತ್ರಸ್ತೆಯರು ದೂರು ನೀಡಲು ಬರುತ್ತಿಲ್ಲ.
ಎಸ್ ಐಟಿ ಸಹಾಯವಾಣಿ ತೆರೆದ ನಂತರ 30 ಕರೆಗಳು ಬಂದಿದ್ದು, ಸಂತ್ರಸ್ತೆಯರು ತಾವು ಕೂಡ ಲೈಂಗಿಕವಾಗಿ ದೌರ್ಜನ್ಯಕ್ಕೋಳಗಾದ ಬಗೆ ವಿವರಿಸಿದ್ದಾರೆ. ಆದರೆ, ಮುಂದೆ ಬಂದು ದೂರು ನೀಡಲು ಸಾಧ್ಯವಾಗುತ್ತಿಲ್ಲ. ನಮಗೆ ಕುಟುಂಬ, ಸಂಬಂಧಿಕರು ದೂರವಾಗುತ್ತಾರೆ ಎಂಬ ಭಯವಿದೆ. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ತೋರಿಸಿದರೆ, ಸಾಮಾಜಿಕ ಮನ್ನಣೆ ಕಳೆದುಕೊಳ್ಳುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಗೌಪ್ಯತೆ ಕಾಪಾಡುವ ಭರವಸೆ ನೀಡಿದೆ. ಇದೀಗ ಗೃಹಸಚಿವರು ಅದೇ ಭರವಸೆ ನೀಡಿ, ದೂರು ನೀಡುವಂತೆ ಮನವಿ ಮಾಡಿದ್ದಾರೆ.
