ಬೆಂಗಳೂರು: ಮೊಟ್ಟೆ ಸಣ್ಣದಾದರೂ ಪ್ರಾಣ ತೆಗೆಯುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಮೊಟ್ಟೆ ವಿಷಯಕ್ಕೆ ದಂಪತಿಗಳಿಬ್ಬರು ಕಿತ್ತಾಡಿಕೊಂಡ ಪರಿಣಾಮ ಪತ್ನಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಗ್ರಾಮದಲ್ಲಿ ವಾಸವಿದ್ದ ಪೂಜಾ ಮತ್ತು ಅನಿಲ್ ಕುಮಾರ್ ದಂಪತಿ, ಊಟ ಮಾಡುವ ಸಂದರ್ಭದಲ್ಲಿ ಮೊಟ್ಟೆಗಾಗಿ ಜಗಳ ಮಾಡಿಕೊಂಡಿದ್ದರು. ಪತಿ ಅನಿಲ್ ಕುಮಾರ್, ನಾನು ಮನೆಯ ಯಜಮಾನ, ನನಗೆ ಒಂದು ಮೊಟ್ಟೆ ಹೆಚ್ಚಿಗೆ ಬೇಕು ಎಂದು ಪಟ್ಟು ಹಿಡಿದಿದ್ದ.
ಗಂಡನ ವರ್ತನೆಗೆ ಬೇಸತ್ತ ಹೆಂಡತಿ ಪೂಜಾ ಮನೆಯ ಮೂರನೇ ಮಹಡಿಯಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಇಂತಹ ತಾರತಮ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಗಿಕೊಂಡು ಆಕೆ ಮನೆ ಮೇಲಿಂದ ನೆಗೆದಿದ್ದಾಳೆ ಎನ್ನಲಾಗಿದೆ.
ಮೇಲಿಂದ ಬಿದ್ದು, ಗಂಭಿರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರಾದರೂ, ಆಕೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶ ಮೂಲದವರಾದ ಪೂಜಾ ಮತ್ತು ಅನಿಲ್ ಕುಮಾರ್ ದಂಪತಿ, ಎರಡು ವರ್ಷದ ಹಿಂದೆ ಬೆಂಗಳೂರು ನಗರಕ್ಕೆ ಬಂದಿದ್ದರು. ಎರಡು ವರ್ಷದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿದ್ದ ದಂಪತಿ, ಇಂದು ಮೊಟ್ಟೆಯ ವಿಚಾರವನ್ನೇ ರಾದ್ಧಾಂತ ಮಾಡಿಕೊಂಡಿದ್ದಾರೆ. ಈ ರಾದ್ಧಾಂತ ಮಡದಿಯ ಸಾವಿನೊಂದಿಗೆ ಅಂತ್ಯವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಪೂಜಾಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದು, ಆಕೆಯ ಆತ್ಮಹತ್ಯೆಗೆ ಕಾರಣವಾದ ಪತಿ ಅನಿಲ್ ಕುಮಾರ್ ನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
