ರಾಜಕೀಯ ಸುದ್ದಿ

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಹಗಲು ದರೋಡೆ: ಶಾಸಕ ಯತ್ಮಾಳ್

Share It

ಕಲಬುರಗಿ: ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇದರಲ್ಲಿ ದಿಲ್ಲಿಮಟ್ಟದವರು ಭಾಗಿಯಾಗಿದ್ದಾರೆ. ದಿಲ್ಲಿಯಿಂದ ಓರ್ವ ಕರ್ನಾಟಕಕ್ಕೆ ವಸೂಲಿಗೆ ಬರ್ತಾರೆ. ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಮ್ ಆಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು.

ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೊಟಿ ಹಗರಣ ನಡೆದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೇ ಒಂದು ಶಂಕುಸ್ಥಾಪನೆ, ಗುದ್ದಲಿ ಪೂಜೆ ನಡೆಯುತ್ತಿಲ್ಲ. ಶಾಸಕರೆಲ್ಲರೂ ಸದ್ಯ ನಿರುದ್ಯೋಗಿಗಳಾಗಿದ್ದೇವೆ. ಒಂದು ವರ್ಷದಲ್ಲಿ ನಂದೇ ಕ್ಷೇತ್ರದಲ್ಲಿ ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ ಎಂದರು.

ಅಕೌಂಟ್‌ಗೆ ಕಾಂಗ್ರೆಸ್ ಹಣ ಹಾಕುತ್ತೆ ಅಂತಾ ಪೋಸ್ಟ್ಆಫೀಸ್ ಮುಂದೆ ಮುಸ್ಲಿಂ ಹೆಣ್ಮಕ್ಕಳು ಮುಗಿಬಿದ್ದಿದ್ದಾರೆ. ಆದರೆ ನಮ್ಮ ಜನ ವೋಟ್ ಹಾಕೋಕೆ ಹೊರಗೆ ಬರಲ್ಲ..ದುದೈವ. ವಾಲ್ಮೀಕಿ ನಿಗಮದಲ್ಲಿ ನಾಗೇಂದ್ರ ಒಬ್ಬನೇ ಹಣ ತಿಂದಿಲ್ಲ. ಇದರಲ್ಲಿ ರಾಹುಲ್ ಗಾಂಧಿ ಹಿಡಿದು ಪ್ರತಿ ಕಾಂಗ್ರೆಸ್ ಮುಖಂಡರು ಹಣ ತಿಂದಿದ್ದಾರೆ. 187 ಕೋಟಿ ವಾಲ್ಮೀಕಿ ಅಭಿವೃದ್ಧಿ ಹಗರಣವನ್ನ ಸಿಬಿಐಗೆ ವಹಿಸಬೇಕು. ಸುರ್ಜೆವಾಲ ತಿಂಗಳಿಗೊಮ್ಮೆ ಕರ್ನಾಟಕಕ್ಕೆ ವಸೂಲಿಗೆ ಬರ್ತಾನೆ. ಗುತ್ತಿಗೆದಾರರಿಗೆ ಬಿಲ್‌ಗಳು ಸಿಗುತ್ತಿಲ್ಲ. ಡಿಸಿಎಂ 25 ಪರ್ಸೆಂಟ್ ಕಾಮಗಾರಿಗಳನ್ನ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌‌ನವರಷ್ಟು ಭ್ರಷ್ಟಾಚಾರ ಯಾರು ಮಾಡಿಲ್ಲ. ಮಾಡೋದು ಇಲ್ಲ ಎಂದು ಆರೋಪಿಸಿದರು.

ಯಾಕೋ ಪ್ರಿಯಾಂಕ್ ಖರ್ಗೆಯವರು ಬಾಯಿ ಬಂದ್ ಮಾಡಿಕೊಂಡು ಕುಂತಿದ್ದಾರೆ. ಏನ್ ಧ್ಯಾನಕ್ಕೆ ಸರಿದಿದ್ದಾರ? ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಹಾರಾಟ ನಡೆಸಿದ್ದ ಪ್ರಿಯಾಂಕ್ ಖರ್ಗೆ ಎಲ್ಲಿದಾರೆ? ಬರೀ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಸಿಎಂ ಕೂಡ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಜ್ವಲ್ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಪ ಬಂದಮೇಲೆ ಓಡಿಹೋಗಬಾರದು. ಓಡಿ ಹೋಗೋದ್ರಿಂದ ಪ್ರಕರಣ ದೊಡ್ಡದಾಗುತ್ತದೆ.. ಅಕ್ಷಮ್ಯ ಅಪರಾಧವಾಗುತ್ತದೆ. ಎಸ್‌ಐಟಿ ಯಾವ ರೀತಿ ತನಿಖೆ ಮಾಡ್ತಿದಾರೆ ಅನ್ನೊದು ನೋಡಬೇಕು. ಪ್ರಜ್ವಲ್ ಡ್ರೈವರ್ ಎಲ್ಲಿದಾನೆ? ಪೆನ್‌ಡ್ರೈವ್ ಬಹಿರಂಗ ಮಾಡಿದ್ದು ಯಾರು? ಎಂದ ಯತ್ನಾಳ್, ದೇವೆಗೌಡರ ಕುಟುಂಬವನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿ ನಡೆಯುತ್ತಿರುವ ಹಲ್ಕಾ ಕೆಲಸ. ವಕ್ಕಲಿಗರ ನಾಯಕರಾಗಲು ಕೆಲವರು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಯತ್ನಾಳ್ ಆಕ್ರೋಶ ಹೊರಹಾಕಿದರು.


Share It

You cannot copy content of this page