ಬೆಂಗಳೂರು: ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭವಾನಿ ರೇವಣ್ಣ ಪತ್ತೆಗಾಗಿ ಎಸ್ಐಟಿ ಬಲೆ ಬೀಸಿದ್ದು, ಇಂದು ಕೂಡ ಶೋಧ ಕಾರ್ಯ ಮುಂದುವರಿಸಿದೆ.
ನೊಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲದ ಹಿನ್ನೆಲೆಯಲ್ಲಿ ಮೈಸೂರು, ಕೆ.ಆರ್.ನಗರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಭವಾನಿ ರೇವಣ್ಣ ಕೆ.ಆರ್.ನಗರದ ಅಥವಾ ಮೈಸೂರಿನಲ್ಲಿ ತಮ್ಮ ಆಪ್ತರ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಎಸ್ಐಟಿ ಶೋಧ ನಡೆಸುತ್ತಿದೆ.
ಪ್ರಜ್ವಲ್ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿ, ಕೂಡಿ ಹಾಕಿ ಬಲವಂತವಾಗಿ ವಿಡಿಯೋ ಮಾಡಿಸಿದ್ದಾರೆ ಎಂಬ ಆರೋಪ ಭವಾನಿ ರೇವಣ್ಣ ಅವರ ಮೇಲಿದೆ. ಹೀಗಾಗಿಯೇ, ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ನೊಟೀಸ್ಗೆ ಈವರೆಗೆ ಭವಾನಿ ಉತ್ತರ ನೀಡಿಲ್ಲ.
ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಎಸ್ಐಟಿ ಬಂಧನಕ್ಕೆ ಸಿದ್ಧತೆ ನಡಿಸಿದೆ. ನೆನ್ನೆ ಹೊಳೇನರಸೀಪುರದ ರೇವಣ್ಣ ಮನೆಗೆ ಭೇಟಿ ನೀಡಿದ್ದ ಎಸ್ಐಟಿ ಅಧಿಕಾರಿಗಳು, ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸಾಗಿದ್ದಾರೆ. ಇದೀಗ ಮೈಸೂರಿನಲ್ಲಿರಬಹುದು ಎಂಬ ಮಾಹಿತಿ ಮೇರೆಗೆ ಹುಟಕಾಟ ನಡೆಸುತ್ತಿದ್ದಾರೆ.

