ಉಪಯುಕ್ತ ಸುದ್ದಿ

ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ: ಸಬ್ ರಿಜಿಸ್ಟ್ರಾರ್ ಗಳಿಗೆ ಹೈಕೋರ್ಟ್ ಎಚ್ಚರಿಕೆ

Share It

ಬೆಂಗಳೂರು: ಆದಾಯ ತೆರಿಗೆ ಪಾವತಿ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿಯ ನೋಂದಣಿ ಮಾಡುವುಕ್ಕೆ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್‌ ರಾಜ್ಯದ ಸಬ್ ರಿಜಿಸ್ಟ್ರಾರ್ ಗಳಿಗೆ ಆದೇಶಿಸಿದೆ.

ಅಲ್ಲದೇ, ನಿಯಮಬಾಹಿರವಾಗಿ ನೋಂದಣಿಗೆ ನಿರಾಕರಿಸುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿರುವ ನ್ಯಾಯಾಲಯ, ನೋಂದಣಿ ಕಾಯಿದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಬದಲಿಗೆ, ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸುವಂತಿಲ್ಲ ಎಂದು ಸಬ್‌ ರಿಜಿಸ್ಟ್ರಾರ್‌ಗಳಿಗೆ ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ವಿಲ್ಸನ್‌ ಗಾರ್ಡನ್ನಿನ ಹೊಂಬೇಗೌಡನಗರದಲ್ಲಿರುವ 6,000 ಚದರ ಅಡಿಯ ಅಡಮಾನ ಆಸ್ತಿಯನ್ನು 2022ರ ಮಾರ್ಚ್‌ನಲ್ಲಿ ಕೆನರಾ ಬ್ಯಾಂಕ್‌ ಹರಾಜು ಮಾಡಿತ್ತು. ಈ ವೇಳೆ ಭರತ್ ಗೌಡ ಎಂಬುವರು ಹರಾಜಿನಲ್ಲಿ ಯಶಸ್ವಿ ಬಿಡ್‌ದಾರರಾಗಿ ಆಸ್ತಿ ಖರೀದಿಸಿದ್ದರು. ಹರಾಜು ಪ್ರಕ್ರಿಯೆಗಳು ಮುಗಿದ ನಂತರ 2022ರ ಸೆಪ್ಟೆಂಬರ್‌ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು.

ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕ ಪಾವತಿಸಿದ್ದ ಅರ್ಜಿದಾರ ಭರತ್ ಗೌಡ, ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಜೆ.ಪಿ. ನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಮನವಿ ಸಲ್ಲಿಸಿದ್ದರು. ಆದರೆ, ಸಬ್‌ ರಿಜಿಸ್ಟ್ರಾರ್‌, ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. 2024ರ ಫೆ. 18ರಂದು ಮತ್ತೆ ಮನವಿ ಸಲ್ಲಿಸಿದ್ದರೂ ಸಬ್‌ ರಿಜಿಸ್ಟ್ರಾರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್ ತೀರ್ಪಿನ ಸಾರಾಂಶ: ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ನೋಂದಣಿ ಕಾಯಿದೆ ಮತ್ತು ರಾಜ್ಯ ಸರಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪ ನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸಬಹುದಾಗಿದೆ. ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಅವರ ಆಸ್ತಿ ಖರೀದಿ ಮಾಡಿದವರಿಗೆ ನೋಂದಣಿ ನಿರಾಕರಿಸುವಂತಿಲ್ಲ ಎಂದು ಆದೇಶಿಸಿದೆ.

ಅಲ್ಲದೇ, ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲಗಳು ಇಲ್ಲವಾದಲ್ಲಿ ನೋಂದಣಿ ಮಾಡದೆ ನಿರಾಕರಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಜತೆಗೆ, ಈ ಕುರಿತಂತೆ ರಾಜ್ಯ ಸರ್ಕಾರ ನೋಂದಣಿ ನಿಯಮಗಳ ಕುರಿತು ಸೂಕ್ತ ಸೂತ್ತೋಲೆ ಹೊರಡಿಸಬೇಕೆಂದು ಸೂಚನೆ ನೀಡಿದೆ. (ಮೂಲ: lawtime.in)


Share It

You cannot copy content of this page