ಬೆಂಗಳೂರು: ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ತನ್ನ ಪಾತ್ರವೇ ಇಲ್ಲ ಎಂದು ಕಳ್ಳಾಟ ಆಡುತ್ತಿದ್ದ ತೆಲುಗು ನಟಿ ಹೇಮಾಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದಡಿ ಇಂದು ವಿಚಾರಣೆಗೆ ಹಾಜರಾಗುವಂತೆ ತಲುಗು ನಟಿ ಹೇಮಾಗೆ ಮೂರನೇ ನೊಟೀಸ್ ನೀಡಲಾಗಿತ್ತು. ಹೇಮಾ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈ ಮೊದಲು ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ನೀಡುವಂತೆ ಹೇಮಾ, ಸಿಸಿಬಿ ಪೊಲೀಸರಲ್ಲಿ ಮನವಿ ಮಾಡಿದ್ದರು. ಹೀಗಾಗಿ ಜೂ.1ರಂದು ಹಾಜರಾಗುವಂತೆ ಎರಡನೇ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ 3ನೇ ನೋಟಿಸ್ ನೀಡಿದ ಪರಿಣಾಮ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ನಟಿಯನ್ನು ಬಂಧಿಸಿದರು.
ನಟಿ ಹೇಮಾ ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿಯ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ, ಡ್ರಗ್ಸ್ ಸೇವಿಸಿಲ್ಲ ಎಂದು ವಿಡಿಯೋ ಮಾಡಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೇವ್ ಪಾರ್ಟಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಡಿ.ಜೆ.ಹಳ್ಳಿ ನಿವಾಸಿ ಇಮಾರ್ ಶರೀಫ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪಾರ್ಟಿಗೆ ಡ್ರಗ್ಸ್ ಸಹಿತ ಬರುವಂತೆ ಶರೀಫ್‌ಗೆ ತಿಳಿಸಲಾಗಿತ್ತು. ಅದರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಪಾರ್ಟಿಗೆ ಬಂದಿದ್ದ. ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ಆರೋಪಿ ಶರೀಫ್ ಬಳಿ 40 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿತ್ತು.
ರೇವ್ ಪಾರ್ಟಿ ಜೊತೆ ಡ್ರಗ್ಸ್ ಸೇವನೆ ಅಕ್ರಮ ಎಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಪಾರ್ಟಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಹೇಮಾ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್: ನಟಿ ಹೇಮಾಳನ್ನು ಬಂಧನ ಮಾಡಿರುವ ಸಿಸಿಬಿ ಪೊಲೀಸರು ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಲಿದ್ದಾರೆ. ಇದಕ್ಕೆ ಮೊದಲು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆಕೆಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯುವ ವೇಳೆ ನಟಿ ಹೇಮಾ ಸಿಕ್ಕಸಿಕ್ಕವರ ಮೇಲೆ ರೇಗಾಡಿದ್ದಾರೆ ಎಂದು ಹೇಳಲಾಗುತ್ತಿದೆ.
updating………….

