ಗ್ಯಾಂಗ್ಟಕ್ : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್ಕೆಎಂ) ಶಾಸಕಾಂಗ ಪಕ್ಷದ ನಾಯಕರಾಗಿ ಪ್ರೇಮ್ ಸಿಂಗ್ ತಮಾಂಗ್ ಆಯ್ಕೆಯಾಗಿದ್ದು, 2ನೇ ಬಾರಿ ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 31 ಶಾಸಕರು ಹಾಜರಿದ್ದರು. ಈ ಸಭೆಯಲ್ಲಿ ಎಸ್ಕೆಎಂ ಪ್ರಧಾನ ಕಾರ್ಯದರ್ಶಿ ಅರುಣ್ ಉಪ್ರೇತಿ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಸಿಎಂ ತಮಾಂಗ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಅದನ್ನು ಪಕ್ಷದ ಶಾಸಕಿ ಸೋನಮ್ ಲಾಮಾ ಅನುಮೋದಿಸಿದರು.
ನಂತರ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಕ್ಷದ ನಾಯಕರು ತಮಾಂಗ್ ಅವರ ಆಯ್ಕೆಗೆ ಅಭಿನಂದನೆ ಸಲ್ಲಿಸಿದ್ದು, ಅವರ ನಾಯಕತ್ವದಲ್ಲಿ ಸಮರ್ಪಣಾಭಾವದಿಂದ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

