ನವದೆಹಲಿ: ಬಿಜೆಪಿ ಸಾರಥ್ಯದ ಎನ್‌ಡಿಎ ಒಕ್ಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂಬ ಎಕ್ಸಿಟ್ ಫೋಲ್ ಸಮೀಕ್ಷೆ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದು, ಇಂಡಿಯಾ ಒಕ್ಕೂಟ ನಿರೀಕ್ಷೆಯಂತೆಯೇ ಭರ್ಜರಿ ಪ್ರದರ್ಶನ ಕಾಣುತ್ತಿದೆ.
೨೦೨೪ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಸಹಜವಾಗಿಯೇ ಬಿಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿ ಕೂಟ ಭಾರೀ ಮುನ್ನಡೆ ಸಾಧಿಸುವ ನಿರೀಕ್ಷೆ ಇತ್ತು. ಆದರೆ, ಫಲಿತಾಂಶದ ವೇಳೆ ಅಸಲಿಯತ್ತು ಬಹಿರಂಗವಾಗಿದೆ. ಇಂಡಿಯಾ ಮೈತ್ರಿ ಕೂಟ ೨೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ!
ಸಮೀಕ್ಷೆಗಳೆಲ್ಲ ಉಲ್ಟಾ;
೨೦೨೪ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುನ್ನವೇ ಹೊರ ಬಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಆಡಳಿತಾರೂಢ ಎನ್‌ಡಿಎಗೆ ಭಾರೀ ಬಹುಮತ ಸಿಗಲಿದೆ ಎಂದೇ ನಿರೀಕ್ಷಿಸಿದ್ದವು. ಇನ್ನು ೭ ಹಂತಗಳ ಮತದಾನ ಪ್ರಕ್ರಿಯೆ ಬಳಿಕ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳೂ ಕೂಡಾ ಎನ್‌ಡಿಎಗೇ ಜೈ ಎಂದಿದ್ದವು. ಆದರೆ, ಫಲಿತಾಂಶ ಮಾತ್ರ ಬೇರೆಯದೇ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಉತ್ತರ ಪ್ರದೇಶದಲ್ಲೇ ಇಂಡಿಯಾ ಒಕ್ಕೂಟ ಮುನ್ನಡೆ: ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳಲ್ಲೇ ಇಂಡಿಯಾ ಮೈತ್ರಿ ಕೂಟ ತನ್ನ ಸಂಖ್ಯಾ ಬಲ ಹೆಚ್ಚಿಸಿ ಕೊಂಡಿದೆ. ಮಹಾರಾಷ್ಟ್ರ ರಾಜ್ಯದಲ್ಲೂ ಇಂಡಿಯಾ ಮೈತ್ರಿ ಕೂಟದ ಮಹಾ ವಿಕಾಸ್ ಅಘಾಡಿ ಮುನ್ನಡೆ ದಾಖಲಿಸಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷಗಳೇ ಪ್ರಾಬಲ್ಯ ಮೆರೆದಿವೆ.

