ರಾಜಕೀಯ ಸುದ್ದಿ

ಧಾರವಾಡದಲ್ಲಿ ಜೋಶಿ ಜೋಶ್; ಮೊಳಗಿತು ದಾಖಲೆಯ ಜಯಘೋಷ

Share It

ಸತತ 5ನೇ ಬಾರಿ ಐತಿಹಾಸಿಕ ಗೆಲುವು ದಾಖಲಿಸಿದ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಅತ್ತ ವಾಣಿಜ್ಯ ನಗರಿ.. ಇತ್ತ ಸಾಂಸ್ಕೃತಿಕ ನಗರಿ.. ಸುತ್ತಮುತ್ತ ಗ್ರಾಮ ಸ್ವರಾಜ್ಯ.. ಎಲ್ಲೆಲ್ಲಿ ನೋಡಿದ್ರೂ ಜೋಶಿ ಅವರದ್ದೇ ಜೋಶ್ !

ಅದೊಂದು ಕಾಲದಲ್ಲಿ ಸಂಗೀತ ಲೋಕದಲ್ಲಿ ಭೀಮಸೇನ್ ಜೋಶಿ ಅವರ ಮಾಧುರ್ಯ ಮಾರ್ಧನಿಸಿದರೆ ಇಂದು ರಾಜಕೀಯದ ರಣ ಭೂಮಿಯಲ್ಲಿ ಪ್ರಲ್ಹಾದ ಜೋಶಿ ಅವರ ಜಯಘೋಷವೇ ಮೊಳಗುತ್ತಿದೆ.

ಹೌದು, ಈಗ ಧಾರವಾಡ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಒಂದು ಸಂಗೀತ ಕ್ಷೇತ್ರ ಮತ್ತೊಂದು ರಾಜಕೀಯ ನೆಲೆಗಟ್ಟು. ಸಂಗೀತ ಲೋಕದಲ್ಲಿ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರು ಅಚ್ಚಳಿಯದೆ ಇದೆ. ಅಂತೆಯೇ ಈಗ ರಾಜಕೀಯವಾಗಿ ಪ್ರಲ್ಹಾದ ಜೋಶಿ ಅವರ ಹೆಸರೂ ಅಜರಾಮರ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂಥ ಒಂದು ಹವಾ ಸೃಷ್ಟಿಸಿದ್ದಾರೆ. ಸತತ ಐದನೇ ಬಾರಿ ದಾಖಲೆಯ ವಿಜಯ ಪತಾಕೆ ಹಾರಿಸಿದ್ದಾರೆ. ನಿರಂತರವಾಗಿ ಗೆಲುವು ದಾಖಲಿಸುತ್ತಲೇ ಬಂದಿರುವ ಧಾರವಾಡ ಕ್ಷೇತ್ರ ಚುನಾವಣಾ ತಂತ್ರಗಾರಿಕೆ, ವಿರೋಧ ಪಕ್ಷಗಳ ಹಣಾಹಣಿ ನಡುವೆಯೂ ಮತ್ತೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ನಿರೂಪಿಸಿದೆ.

ಪ್ರಲ್ಹಾದ ಜೋಶಿ ಅವರು ಈ ಬಾರಿ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿನೋದ್ ಅಸೂಟಿ ಅವರ ವಿರುದ್ಧ ಸರಿ ಸುಮಾರು 95,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸಂಭ್ರಮ: ಪ್ರಲ್ಹಾದ ಜೋಶಿ ಅವರ ಗೆಲುವು ಘೋಷಣೆ ಆಗುತ್ತಲೇ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಬಿಜೆಪಿ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಮತದಾರರಿಗೆ ಧನ್ಯವಾದ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಶಕ್ತ ಭಾರತ ನಿರ್ಮಾಣಕ್ಕೆ ಪಣ ತೊಟ್ಟ ಮತದಾರರು ಧಾರವಾಡದಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ, ಆಶೀರ್ವದಿಸಿದ್ದು, ಕ್ಷೇತ್ರದ ಎಲ್ಲ ಮತದಾರರಿಗೆ ಅನಂತಾನಂತ ಧನ್ಯವಾದಗಳು ಎಂದಿರುವ ಜೋಶಿ ಅವರು, ಈ ವಿಜಯದ ರೂವಾರಿಗಳು ಹೆಮ್ಮೆಯ ನಮ್ಮ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರಾಗಿದ್ದು, ಸರ್ವರಿಗೂ ಅಭಿನಂದನೆ ಎಂದು ಹೇಳಿದ್ದಾರೆ.


Share It

You cannot copy content of this page