ಶ್ರೀಕಾಂತ್,
ಕಲಬುರಗಿ: ಇಡಿ ರಾಷ್ಟ್ರದ ಗಮನ ಸೇಳೆದಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಮನಿ ಗೆಲುವಿನ ಪಟಾಕಿ ಸಿಡಿಸಿದ್ದಾರೆ.
ರಾಧಾಕೃಷ್ಣ ದೊಡ್ಮನಿ 6,52,321 ಮತ ಪಡೆದು, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವಗಿಂತ 27205 ಹೆಚ್ಚಿನ ಮತ ಪಡೆದು ಜಯಭೇರಿ ಬಾರಿಸಿದ್ದಾರೆ. 6,25,116 ಮತ ಪಡೆದ ಉಮೇಶ ಜಾಧವ ಸೋಲು ಒಪ್ಪಿಕೊಂಡಿದ್ದಾರೆ.
ಮತ ಏಣಿಕೆ ಪ್ರಾರಂಭದಿಂದ ಹಾವು ಏಣಿ ಆಟದಂತೆ ನಾಲ್ಕಾರು ಸಾವಿರ ಮತಗಳ ಅಂತರದಲ್ಲಿ ನಾ ಮುಂದು ತಾ ಮುಂದು ಎಂದು ಮುನ್ನಡೆ ಸಾಧಿಸಿದ ಇಬ್ಬರು ಅಭ್ಯರ್ಥಿಗಳು 12 ನೇ ಹಂತದ ಮತ ಏಣಿಕೆ ನಂತರ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಗೆಲುವಿನತ್ತ ಹೆಜ್ಜೆಹಾಕುತ್ತ ತೆರಳಿದ್ರು. ಕಡೆಗೆ ಫಲಿತಾಂಶದ ವೇಳೆ ವಿಜಯದ ನಗೆ ಬೀರಿದ್ರು. ಜಿಲ್ಲಾ ಚುನಾವಣಾ ಅಧಿಕಾರಿಗಳು ಆದ ಜಿಲ್ಲಾಧಿಕಾರಿ ಬಿ ಫೌಜೀಯಾ ತರನ್ನುಮ್ ಗೆಲುವಿನ ಪ್ರಮಾಣ ಪತ್ರ ನೀಡಿದರು.
ಇನ್ನು ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಬಿಜೆಪಿಯ ಬಾವುಟವನ್ನು ಹಾರಿಸಿದ್ದ ಡಾ. ಉಮೇಶ ಜಾಧವ್ ಅವರ ವಿರುದ್ಧ ತಮ್ಮ ಅಳಿಯನನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಖರ್ಗೆ ಸೇಡು ತಿರಿಸಿಕೊಂಡಿದ್ದಾರೆ.
ಈ ಬಾರಿಯೂ ಗೆಲವು ಸಾಧಿಸಿ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸದಿಂದ ಹೈಕಮಾಂಡ್ ಉಮೇಶ್ ಜಾಧವ್ ಅವರನ್ನು ಕಣಕ್ಕೆ ಇಳಿಸಿತ್ತು. ಆದ್ರೆ ಮತದಾರ ಪ್ರಭು ಇದು ತೆಲೆಕೆಳಗಾಗುವಂತೆ ಮಾಡಿದ್ದಾನೆ. ಕಳೆದ ಬಾರಿ ಬಿಜೆಪಿಗೆ ಮತ ನೀಡಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪಂಚ ಗ್ಯಾರಂಟಿಗಳನ್ನು ಮೆಚ್ಚಿ ಈ ಬಾರಿ ರಾಧಾಕೃಷ್ಣ ದೊಡ್ಮನಿ ಅವರನ್ನು ಗೆಲ್ಲಿಸಿ ತಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮೇ. 7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆದಿತ್ತು. ಮಂಗಳವಾರ ಕಲಬುರಗಿ ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಏಣಿಕೆ ಕಾರ್ಯ ನಡೆಯಿತು. ಒಟ್ಟು 13,02,048 ಅರ್ಹ ಮತಗಳಿದ್ದು, ಅದರಲ್ಲಿ 8429 ನೋಟಾ ಮತಗಳಾಗಿ ಚಲಾವಣೆಗೊಂಡಿವೆ. 756 ಮತಗಳು ತಿರಸ್ಕೃತಗೊಂಡಿವೆ.
ಮತಗಳ ವಿವರ:
ಬಿಜೆಪಿ – ಡಾ. ಉಮೇಶ್ ಜಾದವ್ – 625116
ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ- 652321
ಬಹುಜನ ಸಮಾಜ ಪಾರ್ಟಿ- ಹುಚ್ಚೇಶ್ವರ ವಾಥರ್ಗೌರ್-7888
ಉತ್ತಮ ಪ್ರಜಾಕೀಯ ಪಾರ್ಟಿ- ನರೇಂದ್ರ ರಾವ್-1226
ಭಾರತೀಯ ಬಹುಜನ ಕ್ರಾಂತಿದಳ- ರಾಜಕುಮಾರ-709
ಪ್ರಹಾರ ಜನಶಕ್ತಿ ಪಾರ್ಟಿ- ಬಿ ವಿಜಯ್ ಕುಮಾರ್-554
ಕರ್ನಾಟಕ ರಾಷ್ಟ್ರ ಸಮಿತಿ- ವಿಜಯ್ ಜಾದವ್-560
SUCI ( ಕಮ್ಯುನಿಸ್ಟ್)- ಎಸ್ಎಂ ಶರ್ಮ-1144
ಸ್ವತಂತ್ರ ಅಭ್ಯರ್ಥಿ- ಆನಂದ್ ಸಿನ್ನೂರ್-1280
ಸ್ವತಂತ್ರ ಅಭ್ಯರ್ಥಿ- ಜ್ಯೋತಿ ಚೌಹಾನ್-2805
ಸ್ವತಂತ್ರ ಅಭ್ಯರ್ಥಿ- ತಾರಾಬಾಯಿ ಭೋವಿ-1550
ಸ್ವತಂತ್ರ ಅಭ್ಯರ್ಥಿ- ರಮೇಶ್ ಚೌಹಾನ್-1334
ಸ್ವತಂತ್ರ ಅಭ್ಯರ್ಥಿ- ಶರಣಪ್ಪ( ಪಿಂಟು)-1884
ಸ್ವತಂತ್ರ ಅಭ್ಯರ್ಥಿ- ಸುಂದರ್-3677
ನೋಟಾ ಮತಗಳು- 8429

