ರಾಜಕೀಯ ಸುದ್ದಿ

ಪ್ರತಿಸ್ಪರ್ಧಿಗಳ ವಿರುದ್ಧಚುನಾವಣಾ ಆಯೋಗಕ್ಕೆ 5 ದೂರು ನೀಡಿದ ಬಿಜೆಪಿ

Share It

ಬೆಂಗಳೂರು/ಶಿವಮೊಗ್ಗ, (ಏಪ್ರಿಲ್ 10): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆಗೆ ಪೈಪೋಟಿ ಶುರುವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಆದ್ರೆ, ಅವರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು,ಇದೀಗ ಈಶ್ವರಪ್ಪ ಅವರು ಚುನಾವಣಾ ನರೇಂದ್ರ ಮೋದಿ ಫೋಟೋ ಮತ್ತು ಹೆಸರು ಬಳಕೆ ಮಾಡದಂತೆ ರಾಜ್ಯ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಈ ಬಗ್ಗೆ ದೂರು ಸಲ್ಲಿಕೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಅವರು ಮೋದಿ ಫೋಟೋ ಬಳಸಿದ್ದಕ್ಕೆ ದೂರು ನೀಡಿದ ಬಳಿಕ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಶ್ವರಪ್ಪ ಮೋದಿ ಫೋಟೋ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಮೋದಿ ಭಾವಚಿತ್ರವನ್ನ ಬಳಸದಂತೆ ದೂರು ನೀಡಿದ್ದೇವೆ. ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಅಲ್ಲದ ಕಾರಣ ನಮ್ಮ ಪಕ್ಷದ ಹೆಸರು ಭಾವಚಿತ್ರ ಬಳಸುವ ಅಧಿಕಾರ ಅವರಿಗೆ ಇರುವುದಿಲ್ಲ. ಈಶ್ವರಪ್ಪ ಹೀಗೆ ಮುಂದುವರೆದರೆ ಕಾನೂನು ಕ್ರಮ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.

ಮೋದಿ ಫೋಟೋಗಾಗಿ ಈಶ್ವರಪ್ಪ ಕೆವಿಯಟ್ ಅರ್ಜಿ…

ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್‌ ನೀಡದ್ದರಿಂದ ಬಂಡಾಯವೆದ್ದಿರುವ ಕೆ.ಎಸ್‌ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಪ್ರಚಾರದಲ್ಲಿ ಬಿಜೆಪಿ ಚಿಹ್ನೆ ಹೊರತುಪಡಿಸಿ ಮೋದಿ ಭಾವಚಿತ್ರವನ್ನು ಈಶ್ವರಪ್ಪ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯೇ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು ಎಂದು ಹೇಳಿದ್ದರು. ಅಲ್ಲದೇ ಮೋದಿ ಫೋಟೋ ಬಳಕೆಗಾಗಿ ಕೋರ್ಟ್​ಗೆ ಕೆವಿಯಟ್‌ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣಾ ಆಯೋಗಕ್ಕೆ 5 ದೂರು ನೀಡಿದ ಬಿಜೆಪಿ…

  1. ಶಿವಮೊಗ್ಗ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಚುನಾವಣಾ ಪ್ರಚಾರಕ್ಕೆ ಬಳಸಿದ ಬಗ್ಗೆ ಬಿಜೆಪಿ ದೂರು.
  2. ಡಿಸಿಎಂ ಡಿ.ಕೆ.ಶಿವಕುಮಾರ್​ ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅಧಿಕಾರಿಯೇ ಸ್ವತಃ ಊಟ ಬಡಿಸಿರುವ ಬಗ್ಗೆ ದೂರು ನೀಡಲಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ.
  3. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಿರ್ಮಾಪಕರಾಗಿರುವ ರಣಗಲ್ ಚಲನಚಿತ್ರದ ಜಾಹೀರಾತು ಮೊತ್ತವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ದೂರು.
  4. ಕುಡಚಿಯಲ್ಲಿ ಬಿಜೆಪಿ ಎಲ್.ಇ.ಡಿ ವಾಹನದಲ್ಲಿದ್ದ ಪ್ರಣಾಳಿಕೆ ಸಲಹಾ ಪೆಟ್ಟಿಗೆಯನ್ನು ಸುಟ್ಟು ಹಾಕಿರುವ ಬಗ್ಗೆ ದೂರು.
  5. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಕ್ಕಿ ಹಂಚುತ್ತಿರುವ ಆರೋಪದ ಬಗ್ಗೆ ದೂರು.

Share It

You cannot copy content of this page