ಅಂಕಣ ರಾಜಕೀಯ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಗೆದ್ಬಿಟ್ರು: ಪ್ರದೀಪ್ ಈಶ್ವರ್ ರಾಜೀನಾಮೆ ಕೊಡ್ಲೇಬೇಕಾ?

Share It

ಬೆಂಗಳೂರು: “ಡಾ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಒಂದ್ ವೋಟ್ ಜಾಸ್ತಿ ತಗಂಡ್ರು, ನಾನ್ ರಾಜೀನಾಮೆ ಕೊಡ್ತೀನಿ. ಈ ವಿಡಿಯೋ ಜೂಮ್ ಹಾಕಿ, ಸೇವ್ ಮಾಡಿ ಇಟ್ಕೊಳ್ಳಿ”

ಇದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಮಾತನಾಡಿದ ವಿಡಿಯೋ ತುಣುಕು. ಹೌದು, ಪ್ರದೀಪ್ ಈಶ್ವರ್ ಮತ್ತು ಸುಧಾಕರ್ ನಡುವಿನ ವೈರತ್ವವೇ ಹಾಗೆ, ಏಕೆಂದರೆ, ಸುಧಾಕರ್ ತನ್ನ ಮೇಲೆ ಎಸೆದ ಕಲ್ಲುಗಳನ್ನೆಲ್ಲ ಕೂಡಿಟ್ಟುಕೊಂಡೇ ಪ್ರದೀಪ್ ಈಶ್ವರ್, ಶಾಸಕ ಸ್ಥಾನದ ಬಂಗಲೆ ಕಟ್ಟಿರುವುದು.

ಅಷ್ಟೊಂದು ವೈರತ್ವವಿದ್ದಾಗ ಅವರ ಗೆಲುವಿಗೆ ನಾನು ಅಡ್ಡಗಾಲು ಹಾಕುತ್ತೇನೆ ಎನ್ನುವುದನ್ನು, ಸವಾಲು ಹಾಕುವುದನ್ನು ಪ್ರದೀಪ್ ಈ ರೀತಿ ಹೇಳಿದ್ದರು. ಈ ಹೇಳಿಕೆ ಚಿಕ್ಕಬಳ್ಳಾಪುರ ಜನತೆಗೆ ಅಷ್ಟೊಂದು ಇಷ್ಟವಾಗಲಿಲ್ಲ, ಹೀಗಾಗಿ, ಸುಧಾಕರ್ ಭರ್ಜರಿಯಾಗಿ ಗೆಲುವು ಸಾಧಿಸಿದರು. ಹಾಗಂತ ಈಗ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡ್ಲೇಬೇಕಾ?

ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಬಂದ ಕೂಡಲೇ ಪ್ರಜ್ವಲ್ ರೇವಣ್ಣಗೆ ರಾಜೀನಾಮೆ ಕೊಡು ಎಂದು ಯಾರೂ ಹೇಳಲಿಲ್ಲ. ಪ್ರತಾಪ್ ಸಿಂಹ ತಮ್ಮ ಹಳೆಯ ಸಿಟ್ಟನಿಟ್ಟುಕೊಂಡು ಈಗ ಪ್ರದೀಪ್ ರಾಜೀನಾಮೆ ಕೊಡಬೇಕು ಎಂದು ಟ್ವೀಟ್ ಮಾಡ್ತಾರೆ. ಸಿದ್ದರಾಮಯ್ಯ ವರುಣಾದಲ್ಲಿ ಸೋತು, ಮತ್ತೇ ಕ್ಷೇತ್ರ ಬಿಡಬೇಕಾಗುತ್ತೆ, ಎಂದು ಸವಾಲು ಹಾಕಿದ್ದರಲ್ಲ ಪ್ರತಾಪ್ ಸಿಂಹ, ಆಗವರು ರಾಜೀನಾಮೆ ಕೊಟ್ರಾ?

2014 ರ ಲೋಕಸಭಾ ಚುನಾವಣೆ ಸಮಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದು ಮಾತು ಹೇಳಿದರು.” ನರೇಂದ್ರ ಮೋದಿ ಮತ್ತೇ ಪ್ರಧಾನಿಯಾದರೆ, ನಾನು ದೇಶ ಬಿಡುತ್ತೇನೆ” ಈ ಮಾತು ಅದೆಷ್ಟು ಮಂದಿಗೆ ನೆನಪಿದೆ. ಮೋದಿ ಭರ್ಜರಿ ಬಹುಮತದಿಂದ ಗೆದ್ದು ಮತ್ತೊಮ್ಮೆ ಪ್ರಧಾನಿಯಾದರು. ಈಗ ಮತ್ತೊಂದು ಚುನಾವಣೆ ನಡೆದಿದೆ. ಈಗ ಮಾಜಿ ಪ್ರಧಾನಿ ದೇವೇಗೌಡರು ಮೋದಿ ನೇತೃತ್ವದ ಎನ್.ಡಿ.ಎ ಒಕ್ಕೂಟದ ಭಾಗವಾಗಿದ್ದಾರೆ.

ಹಾಗಿದ್ದರೆ, ದೇವೇಗೌಡರು, 2014 ರಲ್ಲೇ ದೇಶ ಬಿಡಬೇಕಾಗಿತ್ತಲ್ಲ? ಹಾಗೇಕೆ ಆಗಲಿಲ್ಲ. ಸ್ವತಃ ಪ್ರಧಾನಿ ಮೋದಿ, ದೇವೇಗೌಡರಿಗೆ ಕರೆ ಮಾಡಿ, ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟರು. ದ್ವೇಷಿಸಿದ್ದವರನ್ನೇ ಕೊನೆಕೊನೆಗೆ ಪ್ರೀತಿಯಿಂದ ತಮ್ಮ ಜತೆಗೆ ಉಳಿಯುವಂತೆ ಮಾಡಿಕೊಂಡಿದ್ದಾರೆ. ಈಗ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರದ್ದು ಬಿಡಿಸಲಾರದ ಒಡನಾಟ.

ಈ ಒಡನಾಟದ ಫಲವೇ ಸುಧಾಕರ್ ಗೆಲುವು ಅಷ್ಟೊಂದು ಸುಲಭವಾಗಿದ್ದು. ದೇವೇಗೌಡರ ಪಕ್ಷದ ಮತಗಳು ಡಾ.ಸುಧಾಕರ್ ಪಾಲಾಗಿದ್ದೇ ಬಿಜೆಪಿ ಸುಲಭ ಗೆಲುವಿಗೆ ಸಹಕಾರಿ ಆಯ್ತು. ಬಿಡಿ ಅದು ಮೈತ್ರಿಗೆ ಸಂಬಂಧಿಸಿದ ವಿಚಾರ. ಈಗ ರಾಜೀನಾಮೆ ವಿಚಾರಕ್ಕೆ ಬರೋಣ.

ಪ್ರದೀಪ್ ಈಶ್ವರ್ ಮೊದಲ ಬಾರಿ ಶಾಸಕ, ಪ್ರತಾಪ್ ಸಿಂಹ ಎರಡು ಬಾರಿ ಸಂಸದ, ದೇವೇಗೌಡರು ಒಮ್ಮೆ ಪ್ರಧಾನಿ, ಮತ್ತೊಮ್ಮೆ ಮುಖ್ಯಮಂತ್ರಿ, ರಾಜಕೀಯ ಮತ್ಸದ್ಧಿ, ಬಿಡಿ ಅವರ ಬಗ್ಗೆ ಮಾತನಾಡುವಂತೆಯೇ ಇಲ್ಲ. ಈ ಮೂರು ಜನರು ತಮ್ಮ ಎದುರಾಳಿಗಳ ಬಗ್ಗೆ ರಾಜೀನಾಮೆಯಂತಹ, ದೇಶಬಿಡುವಂತಹ ಸವಾಲುಗಳನ್ನು ಆಯಾಯ ಕಾಲಘಟ್ಟದಲ್ಲಿ ಹಾಕಿದ್ದಾರೆ. ಆದರೆ, ಯಾರೂ ರಾಜೀನಾಮೆ ನೀಡಿಲ್ಲ, ದೇಶ ಬಿಟ್ಟಿಲ್ಲ, ಹಾಗಾದರೆ ಪ್ರದೀಪ್ ಮಾತ್ರ ರಾಜೀನಾಮೆ ಯಾಕೆ ಕೊಡಬೇಕು?

ಪ್ರದೀಪ್ ಈಶ್ವರ್, ರಾಜಕೀಯದ ಗಂಧ ಗಾಳಿಯೇ ಗೊತ್ತಿಲ್ಲದ ಒಂದು ಬಡ ಕುಟುಂಬದ ಹುಡುಗ, ಶುದ್ಧ ರಾಜಕೀಯ ವ್ಯವಸ್ಥೆಗಾಗಿ ಹೋರಾಟ ನಡೆಸುತ್ತಿದ್ದ ವ್ಯಕ್ತಿ. ಇದೇ ಕಾರಣಕ್ಕೆ ಸುಧಾಕರ್ , ಪ್ರದೀಪ್ ಗೆ ಕೊಡಬಾರದ ಕಾಟ ಕೊಟ್ಟರು. ಇಲ್ಲಸಲ್ಲದ ಕೇಸು ಹಾಕಿಸಿದರು. ಸವಾಲು ಹಾಕಿದರು. ಸರ್ವನಾಶ ಮಾಡುವ ಎಚ್ವರಿಕೆ ನೀಡಿದ್ದರು. ಅವೆಲ್ಲವನ್ನೂ ಮೆಟ್ಟಿ ನಿಂತು ಹೋರಾಡುತ್ತಾ ಪ್ರದೀಪ್ ಕೊನೆಗೊಂದು ದಿನ ಡಾ.ಸುಧಾಕರ್ ಶಾಸಕ ಸ್ಥಾನವನ್ನೇ ಕಿತ್ತುಕೊಳ್ಳುವ ಮೂಲಕ ಗರ್ವಭಂಗ ಮಾಡಿದರು.

ಚಿಕ್ಕಬಳ್ಳಾಪುರ ಜನತೆ ಸುಧಾಕರ್ ಆರ್ಭಟ, ಆಟಾಟೋಪ ನೋಡಿಯೇ, ಅವರನ್ನು ಸೋಲಿಸಿದ್ದರು. ಸೋಲಿನ ನಂತರದ ಅನುಕಂಪ, ಪ್ರದೀಪ್ ಈಶ್ವರ್, ಪದೇಪದೇ ಸುಧಾಕರ್ ವಿರುದ್ಧ ಕೆಣಕುವ ರೀತಿ ನಡೆದುಕೊಂಡದ್ದು, ಮತ್ತದೇ ಜನರಿಗೆ ಡಾ.ಸುಧಾಕರ್ ಪರ ಅನುಕಂಪ ಮೂಡುವಂತೆ ಮಾಡಿತ್ತು. ಹೀಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಕೈಬಿಟ್ಟವರು, ಈಗ ಕೈಹಿಡಿದರು. ಹೀಗಾಗಿ ಸುಧಾಕರ್ ಗೆದ್ದಿದ್ದಾರೆ. ಇದು ಪ್ರಜಾಪ್ರಭುತ್ವದ ಸೌಂದರ್ಯ.

ಹಾಗಂತ, ಅವರು ಗೆದ್ದ ಮಾತ್ರಕ್ಕೆ ಪ್ರದೀಪ್ ಈಶ್ವರ್, ರಾಜೀನಾಮೆ ಕೊಡಲೇಬೇಕು ಎಂದು ಕೇಳುವುದು ಬಾಲಿಶತನ. ಆ ವಿಷಯದಲ್ಲಿ ಸುಧಾಕರ್ ಕೂಡ ಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ. ಆದರೆ ಅವರ ಹಿಂಬಾಲಕರು ಪ್ರದೀಪ್ ಮನೆ ಮೇಲೆ ಕಲ್ಲು ಎಸೆದಿದ್ದಾರೆ. ಪ್ರತಾಪ್ ಸಿಂಹರಂತಹವರು ಸೋಷಿಯಲ್ ಮೀಡಿಯಾದಲ್ಲಿ ಕಲ್ಲೆಸೆಯುತ್ತಿದ್ದಾರೆ. ಇದೆಲ್ಲ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲ.

ಪ್ರದೀಪ್ ಈಶ್ವರ್ ರಾಜಕೀಯದಲ್ಲಿ ಇನ್ನಷ್ಟು ಮಾಗಬೇಕಿದೆ. ಅವರ ಸಿದ್ಧಾಂತ, ಬದ್ಧತೆ ಎಲ್ಲವೂ ಪ್ರಶ್ನಾತೀತ. ಕೆಲವೊಮ್ಮೆ ಪ್ರತಾಪ್ ಸಿಂಹರನ್ನು ಮೀರಿಸುವಷ್ಟಿದೆ. ಆದರೆ, ಮಾತನಾಡುವ ಭರದಲ್ಲಿ ಸ್ವಲ್ಪ ಉದ್ರೇಕದಿಂದ ಮಾತನ್ನಾಡಿದ್ದಾರೆ. ಹಾಗಂತ ಅವರನ್ನು ಹುಚ್ಚ ವೆಂಕಟ್ 2 ಎಂದೆಲ್ಲ ಹೀಯಾಳಿಸುವ ನೆಟ್ಟಿಗರು ಪ್ರದೀಪ್ ಬೆಳೆದು ಬಂದ ದಾರಿಯನ್ನು ನೆಟ್ಟಗೆ ತಿಳಿದುಕೊಳ್ಳಿ, ಅವರ ಬದ್ಧತೆಯ ಕೆಲಸಗಳ ಮೇಲೊಮ್ಮೆ ಕಣ್ಣಾಡಿಸಿ ಆಮೇಲೆ ಮಾತನಾಡಿ.

ವೆಂಕಟೇಶ ಆರ್.ದಾಸ್, ಪತ್ರಕರ್ತರು


Share It

You cannot copy content of this page