ಮಣಿಪುರ : ಪ್ರಕ್ಷುಬ್ಧ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ನಾಗಾ ಪೀಪಲ್ಸ್ ಫ್ರಂಟ್(ಎನ್ಪಿಎಫ್)ನ್ನು ಸೋಲಿಸುವ ಮೂಲಕ ಪ್ರತಿಪಕ್ಷವಾದ ಕಾಂಗ್ರೆಸ್ ಎರಡೂ ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಮಣಿಪುರದ ಕುರಿತು ನಿರ್ಲಕ್ಷ್ಯ ತೋರಿದ ಬಿಜೆಪಿ ಸರಕಾರಕ್ಕೆ ಮಣಿಪುರದ ಜನತೆ ತಕ್ಕ ಪಾಠವನ್ನು ಕಲಿಸಿದ್ದಾರೆ.
ನಮಗೆ ಶಾಶ್ವತ ಭಯ ಮುಕ್ತ ಬದುಕುವ ವಾತಾವರಣ ಬೇಕು, ಶಿಬಿರಗಳಲ್ಲಿ ದಿನದೂಡುತ್ತಿರುವ ನಾವು ಮತದಾನ ಮಾಡುವುದಿಲ್ಲ ಎಂದು ಲೋಕಸಭೆ ಚುನಾವಣೆಗೆ ಈ ಹಿಂದೆ ಮಣಿಪುರದ ನಿರಾಶ್ರಿತರ ಶಿಬಿರದಲ್ಲಿದ್ದ ಜನತೆ ಬಹಿಷ್ಕಾರವನ್ನು ಹಾಕಿದ್ದರು. ಮಣಿಪುರದಲ್ಲಿ ಶಾಂತಿ ಸ್ಥಾಪನೆ, ಪುನರ್ವಸತಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಣಿಪುರದಲ್ಲಿ ಎರಡು ಲೋಕಸಭೆ ಕ್ಷೇತ್ರಗಳಿದೆ. ಇನ್ನರ್ ಮಣಿಪುರ ಕ್ಷೇತ್ರದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಕಾಂಗ್ರೆಸ್ ಅಭ್ಯರ್ಥಿ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರು ರಾಜ್ಯ ಶಿಕ್ಷಣ ಸಚಿವ ಬಿಜೆಪಿಯ ಟಿ ಬಸಂತ ಕುಮಾರ್ ಸಿಂಗ್ ಅವರನ್ನು 109,801 ಮತಗಳಿಂದ ಸೋಲಿಸಿದ್ದಾರೆ. ಹೊರ ಮಣಿಪುರ ಕ್ಷೇತ್ರವು ಬುಡಕಟ್ಟು ಸಮುದಾಯಗಳಿಗೆ ಮೀಸಲಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಆಲ್ಫ್ರೆಡ್ ಕಂಗಮ್ ಆರ್ಥರ್ ಗೆದ್ದುಕೊಂಡಿದ್ದಾರೆ. ಕಂಗಮ್ ಆರ್ಥರ್ ನಿವೃತ್ತ ಕಂದಾಯ ಅಧಿಕಾರಿ ಎನ್ಪಿಎಫ್ನ ಕಚುಯಿ ತಿಮೋತಿ ಜಿಮಿಕ್ ಅವರನ್ನು 85,418 ಮತಗಳಿಂದ ಸೋಲಿಸಿದ್ದಾರೆ.
2019ರಲ್ಲಿ ಬಿಜೆಪಿ ಇನ್ನರ್ ಮಣಿಪುರ ಸ್ಥಾನವನ್ನು ಗೆದ್ದಿತ್ತು, ಎನ್ಪಿಎಫ್ ಹೊರ ಮಣಿಪುರವನ್ನು ಗೆದ್ದುಕೊಂಡಿತ್ತು. ಈ ಬಾರಿ ಇನ್ನರ್ ಮಣಿಪುರದಲ್ಲಿ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಹೊರ ಮಣಿಪುರದಲ್ಲಿ ಎನ್ಪಿಎಫ್ಗೆ ಬೆಂಬಲ ನೀಡಿತ್ತು.
ಮಣಿಪುರ ಕಳೆದ ಒಂದು ವರ್ಷ ವ್ಯಾಪಕ ಹಿಂಸಾಚಾರದಿಂದ ಪ್ರಕ್ಷುಬ್ಧವಾಗಿತ್ತು. ಆದರೆ ಪ್ರಧಾನಿ ಮೋದಿ ಒಂದೇ ಒಂದು ಬಾರಿ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ.
