ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸಹಕಾರಿ‌ ಬ್ಯಾಂಕ್ ನಲ್ಲಿದ್ದ 45 ಕೋಟಿ ರೂ. ಜಪ್ತಿ

Share It

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್​ನಲ್ಲಿದ್ದ 45 ಕೋಟಿ ರೂ. ಹಣ ಜಪ್ತಿ ಮಾಡಿದೆ.

ಬಂಧಿತ ಆರೋಪಿ ಸತ್ಯನಾರಾಯಣ್‌ ಒಡೆತನದ ಸಹಕಾರಿ ಬ್ಯಾಂಕ್ ಇದಾಗಿದ್ದು, ಇದೇ ಬ್ಯಾಂಕ್‌ ಖಾತೆಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕಿನ 18 ನಕಲಿ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆಯಾಗಿತ್ತು.

ವರ್ಗಾವಣೆಯಾಗಿದ್ದ 94.73 ಕೋಟಿ ರೂ. ಪೈಕಿ ಬಹುಪಾಲು ಹಣ ಡ್ರಾ ಆಗಿತ್ತು. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್​ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಈವರೆಗೆ ಐವರನ್ನು ಎಸ್​ಐಟಿ ಬಂಧಿಸಿದೆ. ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಬಂಧಿತರು. ಐವರನ್ನು ಕಸ್ಟಡಿಗೆ ಪಡೆದು ಎಸ್​ಐಟಿ ವಿಚಾರಣೆ ನಡೆಸುತ್ತಿದೆ.

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್​ ಆತ್ಮಹತ್ಯೆ ಪ್ರಕರಣ ಸಚಿವರಿಗೂ ಕಂಟಕ ತಂದಿಟ್ಟಿದೆ. ಕೇಸ್​ ಸಂಬಂಧ ಸಿಬಿಐ ಯಾವಾಗ ಎಫ್ಐಆರ್​ ದಾಖಲಿಸಿಕೊಂಡಿತೋ, ಖುದ್ದು ಸಿಎಂ ಸಿದ್ದರಾಮಯ್ಯ ಸಚಿವ ನಾಗೇಂದ್ರ ಕರೆಸಿಕೊಂಡು ಒಂದಿಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ರಾಜೀನಾಮೆ ಕೊಡೋದು ಅನಿವಾರ್ಯ ಅಂತ ಹೇಳಿದ್ದಾರಂತೆ ಎಂದು ಮೂಲಗಳು ಹೇಳಿವೆ.

ನಾಗೇಂದ್ರ ವಿಚಾರವನ್ನು ಬಿಜೆಪಿ ಯಾವಾಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಅಸ್ತ್ರವನ್ನಾಗಿಸಿತೋ, ಸಿಬಿಐ ಎಂಟ್ರಿ ಯಾವಾಗ ಆಯ್ತೋ, ಸರ್ಕಾರ ಫುಲ್​ ಅಲರ್ಟ್ ಆಯ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಹಗರಣ ಆರೋಪದ ಬಗ್ಗೆ ಮಾಹಿತಿ ಪಡೆದುಕೊಂಡು ಚರ್ಚೆ ಮಾಡಿದರು. ಇಷ್ಟೇ ಅಲ್ಲ ಖುದ್ದು ನಾಗೇಂದ್ರರನ್ನ ಕಾವೇರಿ ನಿವಾಸಕ್ಕೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಮತ್ತೆ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾಗೇಂದ್ರ ಇಂದು ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Share It

You cannot copy content of this page