ರಾಜಕೀಯ ಸುದ್ದಿ

ಸಂಸದ ಬಿವೈಆರ್ ಗೆ ಸಚಿವ ಸ್ಥಾನಕ್ಕಾಗಿ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಗೆ ಪೂಜೆ

Share It

ಸೊರಬ : ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದು ಪ್ರಾರ್ಥಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿ ಗ್ರಾಮದ ಶಕ್ತಿ ದೇವತೆ ಶ್ರೀ ರೇಣುಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ ಮಾತನಾಡಿ, ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನತೆ ಅಪೂರ್ವ ಬೆಂಬಲ ಸೂಚಿಸಿ ಪುನಃ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆಯೂ ಚುನಾವಣೆ ಪೂರ್ವದಲ್ಲಿ ರಾಘವೇಂದ್ರ ಅವರು ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನಾಶೀರ್ವಾದ ಪಡೆದಿದ್ದರು. ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆಶೀಕ್ ನಾಗಪ್ಪ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಶಕೆಗೆ ಮುನ್ನುಡಿ ಬರೆದು ಸತತ ನಾಲ್ಕನೇ ಬಾರಿ ಜಯ ಸಾಧಿಸಿರುವ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರೈಲ್ವೆ ಅಥವಾ ವಿಮಾನಯಾನ ಖಾತೆ ಲಭಿಸಲಿ. ಈ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದರು.

ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ವಿಶೇಷ ಆಹ್ವಾನಿತ ಗುರುಮೂರ್ತಿ ದೇವತಿಕೊಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ವಿದ್ಯುತ್ ನಗರ, ಚಂದ್ರಗುತ್ತಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೇಟ್ ಸೇರಿದಂತೆ ಇತರರಿದ್ದರು.


Share It

You cannot copy content of this page