ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ಆರೋಪದಲ್ಲಿ ಸಚಿವ ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳಿಗೆ ಡಿ.ಕೆ.ಶಿವಕುಮಾರ್ ತೆರೆ ಎಳೆದಿದ್ದಾರೆ.
ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಮೇಲೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪವಿದೆ. ಈಗಾಗಲೇ ಅಧಿಕಾರಿ ಚಂದ್ರಶೇಖರನ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ್ ಅವರನ್ನು ಬಂಧಿಸಲಾಗಿದೆ.

ರಾಜ್ಯ ಸರಕಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದೆ. ಈ ನಡುವೆಯೇ ಪ್ರಕರಣವನ್ನು ಸಿಬಿಐ ಕೂಡ ಕೈಗೆತ್ತಿಕೊಂಡಿದ್ದು, ಸಿಬಿಐ ಎಫ್‌ಐಆರ್ ದಾಖಲು ಮಾಡಿಕೊಂಡಿದೆ. ಹೀಗಾಗಿ, ನಾಗೇಂದ್ರ ಅವರನ್ನು ರಾಜೀನಾಮೆ ಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ, ಇಂದು ಅವರು ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ, ಡಿ.ಕೆ.ಶಿವಕುಮಾರ್ ನಾಗೇಂದ್ರ ರಾಜೀನಾಮೆ ನೀಡಿಲ್ಲ, ೪.೩೦ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನ್ನಾಡುತ್ತಾರೆ. ಆಗ ನಿಮಗೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ನಾಗೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ, ನಂತರ ರಾಜೀನಾಮೆ ನೀಡಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದ್ದಾರೆ. ಸರಕಾರಕ್ಕೆ ಆಗುವ ಮುಜುಗರ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನಾಗೇಂದ್ರ ರಾಜೀನಾಮೆ ಕೊಡಿಸುವುದು ಸೂಕ್ತ ಎಂದು ಈಗಾಗಲೇ ಕಾಂಗ್ರೆಸ್ ತೀರ್ಮಾನಿಸಿದೆ.
ಏನಿದು ಪ್ರಕರಣ?: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು ೧೮೭ ಕೋಟಿ ರು ಹಣವನ್ನು ಅಕ್ರವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಅಧಿಕಾರಿ ಶೀವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಬ್ಯಾಂಕ್ ಅಧಿಕಾರಿಗಳನ್ನು ಇಂಡಿಯನ್ ಬ್ಯಾಂಕ್ ಅಮಾನತು ಮಾಡಿದೆ. ಪ್ರಕರಣದ ತನಿಖೆ ನಡೆಸುವಂತೆ ಬ್ಯಾಂಕ್ ಸಿಬಿಐಗೆ ದೂರು ನೀಡಿದೆ. ಹೀಗಾಗಿ, ಅವರ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಕಾಂಗ್ರೆಸ್ ತೀರ್ಮಾನಿಸಿದೆ.

