ಅಪರಾಧ ರಾಜಕೀಯ ಸುದ್ದಿ

ಕಾಂಗ್ರೆಸ್ ಸರಕಾರದ ಮೊದಲ ವಿಕೆಟ್ ಪತನ: ಸಚಿವ ಬಿ.ನಾಗೇಂದ್ರ ರಾಜೀನಾಮೆ

Share It

ಬೆಂಗಳೂರು: ವಾಲ್ಮೀಕಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದ ಆರೋಪದಲ್ಲಿ ಸಚಿವ ಬಿ. ನಾಗೇಂದ್ರ ಅವರ ತಲೆದಂಡವಾಗಿದ್ದು, ಅವರು ಇಂದು ರಾಜೀನಾಮೆ ನೀಡಿದ್ದಾರೆ.

ಸಂಜೆ 4.30 ಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜೀನಾಮೆ ಕುರಿತ ಊಹಾಪೋಹಗಳಿಗೆ ತೆರೆಎಳೆದ ಅವರು, ನಾನು ನನ್ನ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಸಂಜೆ 7.30 ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.

ನನಗೆ ರಾಜೀನಾಮೆ ನೀಡುವಂತೆ ಪಕ್ಷದಲ್ಲಿ ಯಾರ ಒತ್ತಡವೂ ಇಲ್ಲ, ಸಿಎಂ ಆಗಲೀ, ಡಿಸಿಎಂ ಆಗಲೀ, ರಾಜೀನಾಮೆ ನೀಡುವಂತೆ ಸೂಚನೆ ನೀಡಿಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ಪಕ್ಷಕ್ಕೆ ಮತ್ತು ಪಕ್ಷದ ನಾಯಕರಿಗೆ ಮುಜುಗರವಾಗಬಾರದು ಎಂಬ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿವರಿಸಿದರು.

ನಿಗಮದಲ್ಲಿದ್ದ 94.74 ಕೋಟಿ ಅನುದಾನವನ್ನು ವಸಂತನಗರದ ಯೂನಿಯನ್ ಬ್ಯಾಂಕ್ ಖಾತೆಯಿಂದ ಎಂ.ಜಿ ರಸ್ತೆ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಹೈದರಾಬಾದ್‌ನ ರತ್ನಾಕರ ಬ್ಯಾಂಕ್ ಲಿಮಿಟೆಡ್ ಸೊಸೈಟಿಯ 18 ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ರತ್ನಾಕ ಬ್ಯಾಂಕ್‌ಗೆ ವರ್ಗಾಯಿಸಿ, ಅಲ್ಲಿಂದ ಡ್ರಾ ಮಾಡಿಕೊಳ್ಳಲಾಗಿತ್ತು. ಈ ಅಕ್ರಮದ ತನಿಖೆ ನಡೆಸಲು ಎಸ್‌ಐಟಿ ರಚನೆಯಾಗಿದ್ದು, ನಿಗಮದ ಅಧಿಕಾರಿಗಳು ಮತ್ತು ನಾಗೇಂದ್ರ ಆಪ್ತ ನೆಟ್ಟಂಕಿ ನಾಗರಾಜ್ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಯೂನಿಯನ್ ಬ್ಯಾಂಕ್ ಕೂಡ ಪ್ರಕರಣದಲ್ಲಿ ಮೂವರು ಅಧಿಕಾರಿಗಳ ಅಮಾನತು ಮಾಡಿದ್ದು, ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಕೂಡ ತನಿಖೆ ಆರಂಭಿಸಿದೆ. ಎರಡು ಕಡೆ ತನಿಖೆ ನಡೆಯುತ್ತಿದ್ದು, ಇದರಿಂದ ನಾಗೇಂದ್ರ ಅವರ ಮೇಲೆ ಆರೋಪಗಳು ಹೆಚ್ಚಾಗಿ ಕೇಳಿಬಂದಿವೆ. ಇದು ಸರಕಾರಕ್ಕೆ ಮುಜುಗರ ತರುವ ವಿಷಯವಾಗಿದ್ದುಯ, ಅವರ ರಾಜೀನಾಮೆ ಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು.


Share It

You cannot copy content of this page