ಬೆಂಗಳೂರು: ಬಿಜೆಪಿ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ಗೆ ಸಾವಿರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಡೆಸುವ ಸಲುವಾಗಿಯೇ ಸಾವಿರಾರು ಕೋಟಿ ರುಪಾಯಿಗಳನ್ನು ಬಿಜೆಪಿ ಖರ್ಚು ಮಾಡಿದೆ. ಹೀಗಾಗಿಯೇ ಎಲ್ಲ ಎಕ್ಸಿಟ್ ಪೋಲ್ಗಳಲ್ಲಿ ೪೦೦ರ ಆಸುಪಾಸಿನಲ್ಲಿ ಬಿಜೆಪಿಗೆ ಸ್ಥಾನಗಳನ್ನು ಕೊಟ್ಟಿದ್ದರು. ಈಗ ಅದೆಲ್ಲವೂ ಉಲ್ಟಾ ಆಗಿದೆ ಎಂದು ಟೀಕಿಸಿದರು.

ಷೇರು ಮಾರುಕಟ್ಟೆಯಲ್ಲಿ ಮೇ 31 ಕ್ಕೆ ದೊಡ್ಡಮೊಟ್ಟದ ಆಕ್ಟಿವಿಟಿ ನಡೆದಿದೆ. ಎಕ್ಸಿಟ್ ಪೋಲ್ ಬರುತ್ತಿದ್ದಂತೆ ಕೆಲವು ಷೇರುಗಳು ಭಾರಿ ಮೌಲ್ಯಗಳೊಂದಿಗೆ ಮಾರಾಟವಾಗಿವೆ. ಜೂನ್ ೪ ಕ್ಕೆ ಇದ್ದಕ್ಕಿದ್ದಂತೆ ಬಿದ್ದು ಹೋಗುತ್ತದೆ. ಪ್ರಧಾನಿ ಕೂಡ ಷೇರು ಖರೀದಿ ಮಾಡುವಂತೆ ಎರಡು ಮೂರು ಇದನ್ನು ಹೇಳಿದ್ದರು. ಗೃಹಸಚಿವರು ಕೂಡ ಈ ಮಾತನ್ನು ಹೇಳಿದ್ದರು. ಇದರ ಹಿಂದೆ ಬೇರೆಯದೆ ಲೆಕ್ಕಾಚಾರವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಗುಡುಗಿದ್ದಾರೆ.
ಎಕ್ಸಿಟ್ ಪೋಲ್ ಮೂಲಕ ಮತ್ತೇ ಬಿಜೆಪಿ ಸರಕಾರ ಬರುತ್ತದೆ ಎಂಬುದಾಗಿ ಬಿಂಬಿಸಿ, ಅದಾನಿ ಕಂಪನಿಯ ಷೇರುಗಳ ಭಾರಿ ಪ್ರಮಾಣದಲ್ಲಿ ಮಾರಾಟವಾಗುವಂತೆ ಮಾಡಿಕೊಂಡಿದ್ದರು. ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಷೇರುಪೇಟೆಯಲ್ಲಿ ಕುಸಿತ ಕಾಣಿಸಿಕೊಂಡಿದೆ. ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

