ನಟನೆಗೆ ಗುಡ್ ಬೈ, ಜೆಡಿಎಸ್ ಸಂಘಟನೆಯೇ ನನ್ನ ಗುರಿ: ನಿಖಿಲ್ ಕುಮಾರಸ್ವಾಮಿ ಘೋಷಣೆ
ಮಂಡ್ಯ: ಕನ್ನಡ ಚಲನಚಿತ್ರಗಳಲ್ಲಿ ಇನ್ನು ನಾನು ನಟಿಸುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ.
ಮಂಡ್ಯ ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಸ್ಯಾಂಡಲ್ ವುಡ್ ಚಲನಚಿತ್ರಗಳಲ್ಲಿ ನಾನು ಮತ್ತೆ ಇನ್ನೆಂದೂ ನಟಿಸುವುದಿಲ್ಲ, ಕಾರಣ ನಾನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡಬೇಕಿದೆ. ಆದ್ದರಿಂದ ನಾನು ಚಲನಚಿತ್ರಗಳಲ್ಲಿ ನಟಿಸಲು ಸಮಯಾವಕಾಶ ಇಲ್ಲ, ಇದರಿಂದಲೇ ನಾನು ಇದೀಗ ನಟನಾ ವೃತ್ತಿಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮತ್ತು ಪದವಿಗಳಿಗೆ ರೇವಣ್ಣ ಪುತ್ರ ಮತ್ತು ಭವಾನಿ ರೇವಣ್ಣ ಅಡ್ಡಗಾಲಾಗುತ್ತಿದ್ದರು. ಇದೀಗ ರೇವಣ್ಣರ ಇಡೀ ಕುಟುಂಬ ಸಂಕಷ್ಟದಲ್ಲಿದ್ದು, ಪಕ್ಷದ ಯಾವುದೇ ಪದವಿಗಳ ಮೇಲೆ ಸಧ್ಯಕ್ಕಂತೂ ಕಣ್ಣು ಹಾಕುವಂತಿಲ್ಲ. ಜತೆಗೆ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬ ಮಾತಿದೆ. ದೇವೇಗೌಡರಿಗೆ ವಯಸ್ಸಿನ ಕಾರಣಕ್ಕೆ ಪಕ್ಷ ಸಂಃಘಟನೆ ಸಾಧ್ಯವಿಲ್ಲ. ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಪಕ್ಷದ ಸಂಘಟನೆಗೆ ಮುಂದಾಗಿದ್ದಾರೆ.

