ಕ್ರೀಡೆ ಸುದ್ದಿ

ಟಿ-೨೦ ವಿಶ್ವಕಪ್‌ನಲ್ಲಿ ಮತ್ತೊಂದು ಸೂಪರ್ ಓವರ್: ಪಾಕಿಸ್ತಾನ ವಿರುದ್ಧ ಯುಎಸ್ ಗೆ ಐತಿಹಾಸಿಕ ಜಯ

Share It

ಡಲ್ಲಾಸ್: ಟಿ-20 ವಿಶ್ವಕಪ್‌ನಲ್ಲಿ ಮತ್ತೊಂದು ಪಂದ್ಯ ಸೂಪರ್ ಓವರ್‌ಗೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಕ್ರಿಕೆಟ್ ಶಿಶು ಅಮೇರಿಕ ತಂಡ ಸೋಲಿಸಿ ಇತಿಹಾಸ ನಿರ್ಮಿಸಿದೆ.

ಪಾಕಿಸ್ತಾನ ನೀಡಿದ್ದ 160 ರನ್ ಗುರಿ ಬೆನ್ನಟ್ಟಿದ ಯುಎಸ್ ಮೊದಲಿಗೆ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಯಿತು. ಬಳಿಕ ಸೂಪರ್ ಓವರ್‌ನಲ್ಲಿ ಗೆದ್ದು ಪಾಕ್‌ಗೆ ಶಾಕ್ ನೀಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಯುಎಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗಿಳಿದ ಪಾಕ್‌ಗೆ ಆರಂಭದಲ್ಲೇ ಆಘಾತ ನೀಡಿ, 26 ರನ್ ಆಗುವಷ್ಟರಲ್ಲಿ ಪ್ರಮುಖ 3 ಬ್ಯಾಟರ್‌ ಪೆವಿಲಿಯನ್ ಅಟ್ಟುವಲ್ಲಿ ಯುಎಸ್ ಬೌಲರ್‌ಗಳು ಸಫಲರಾದರು.

ಮೊಹಮದ್ ರಿಜ್ವಾನ್ 9, ಉಸ್ಮಾನ್ ಖಾನ್ 3 ಹಾಗೂ ಫಖರ್ ಜಮಾನ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಬಾಬರ್ ಅಜಂ (44) ಹಾಗೂ ಆಲ್‌ರೌಂಡರ್ ಶದಾಬ್ ಖಾನ್ (40) ತಂಡಕ್ಕೆ ಚೇತರಿಕೆ ನೀಡಿದರು. ಬಾಬರ್ ನಿಧಾನಗತಿ ಆಟವಾಡಿದರೆ, ಶದಾಬ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ, ನಾಲ್ಕನೇ ವಿಕೆಟ್‌ಗೆ 72 ರನ್ ಸೇರಿಸಿದರು. ಶದಾಬ್ ವಿಕೆಟ್ ಪತನದ ಬಳಿಕ ಅಜಂ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಇಫ್ತಿಕಾರ್ ಅಹಮದ್ 18 ಹಾಗೂ ಶಾಹೀನ್ ಅಫ್ರಿದಿ 23 ರನ್ ಕೊಡುಗೆಯಿಂದ ಪಾಕ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು.

160 ರನ್ ಬೆನ್ನಟ್ಟಿದ ಯುಎಸ್‌ನ ಎಲ್ಲ ಬ್ಯಾಟರ್‌ಗಳೂ ಪಾಕ್ ಬೌಲರ್‌ಗಳೆದರು ಉತ್ತಮ ಆಟ ಪ್ರದರ್ಶಿಸಿ ಎರಡಂಕಿ ಮೊತ್ತ ದಾಟಿದರು. ಮೊದಲ ವಿಕೆಟ್‌ಗೆ ಸ್ಟಿವನ್ ಟೇಲರ್ (12) ಹಾಗೂ ನಾಯಕ ಮೊನಾಕ್ ಪಟೇಲ್ 50 ರನ್ ಸೇರಿಸಿದರು. ಟೇಲರ್ ಔಟಾದ ಬಳಿಕ ಬಂದ ಅಂಡ್ರೀಸ್ ಗೌಸ್ 26 ಬಾಲ್‌ಗಳಲ್ಲಿ 35 ರನ್ ಸಿಡಿಸಿ, ನಾಯಕನಿಗೆ ತಕ್ಕ ಸಾಥ್ ನೀಡಿದರು.

ತದನಂತರ ಆರೋನ್ ಜೋನ್ಸ್ ಅಜೇಯ 36 ರನ್ ಗಳಿಸಿದರೆ, ನಾಯಕನ ವಿಕೆಟ್ ಪತನದ ಬಳಿಕ ಬಂದ ನಿತೀಶ್ ಕುಮಾರ್ 14 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯ ಓವರ್‌ನಲ್ಲಿ 15 ರನ್ ಅತ್ಯವಿತ್ತು. ಒಂದು ಸಿಕ್ಸರ್ ಹಾಗೂ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿದ ಯುಎಸ್ 3 ವಿಕೆಟ್‌ಗೆ 159 ರನ್ ಬಾರಿಸಿ ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು.

18 ರನ್ ನೀಡಿದ ಅಮೀರ್ !
ಸೂಪರ್ ಓವರ್ ಬೌಲಿಂಗ್ ಮಾಡಲು ಬಂದ ಅನುಭವಿ ಬೌಲರ್ ಮೊಹಮದ್ ಅಮೀರ್. ಯುಎಸ್‌ಗೆ 18 ರನ್ ಬಿಟ್ಟುಕೊಟ್ಟರು. ಮೊದಲ ಎಸೆತದಲ್ಲೇ ಜೋನ್ಸ್ ಬೌಂಡರಿ ಬಾರಿಸಿದರು. ನಂತರ ಬಾಲ್‌ಗಳಲ್ಲಿ 2 ಹಾಗೂ 1 ರನ್ ನೀಡಿದ ಅಮೀರ್, ಬಳಿಕ 3 ವೈಡ್ ಹಾಕುವ ಮೂಲಕ ತಪ್ಪು ಮಾಡಿದರು. ವೈಡ್‌ಗಳಿಗೆ ಇತರೆ ರನ್ ಗಳಿಸಿದ ಯುಎಸ್ ಒಟ್ಟಾರೆ 18 ರನ್ ಕಲೆ ಹಾಕಿತು.

ಡಾಟ್ ಬಾಲ್‌ನಿಂದ ಶುರುವಾದ ಯುಎಸ್ ಸೂಪರ್ ಓವರ್ !
ಪಾಕ್ ಬೌಲರ್ ಸೂಪರ್ ಓವರ್ ಅನ್ನು ಬೌಂಡರಿಯಿಂದ ಶುರು ಮಾಡಿದರೆ, ಯುಎಸ್ ಡಾಟ್ ಬಾಲ್‌ನಿಂದ ಶುರು ಮಾಡಿತು. ನೆಟ್ರಾವಲ್ಕರ್ ಮೊದಲ ಬಾಲ್ ಡಾಟ್ ಮಾಡಿದರೆ, ಎರಡನೇ ಎಸೆತದಲ್ಲಿ ಇಫ್ತಿಕಾರ್ ಬೌಂಡರಿ ಬಾರಿಸಿದರು. 3 ನೇ ಬಾಲ್ ವೈಡ್ ಆಗಿದ್ದರಿಂದ ಪಾಕ್‌ಗೆ 4 ಎಸೆತಗಳಲ್ಲಿ 14 ರನ್ ಬೇಕಿತ್ತು. ನಂತರದ ಬಾಲ್‌ನಲ್ಲಿ ಇಫ್ತಿಕಾರ್ ಕ್ಯಾಚ್ ನೀಡಿ ಔಟಾದರು. ಬಳಿಕದ ಬಾಲ್ ವೈಡ್ ಆಗಿದ್ದು, ನಂತರ ಶದಾಬ್ ಬೌಂಡರಿ ಗಳಿಸಿದರು. 5 ನೇ ಎಸೆತದಲ್ಲಿ ಕೇವಲ 2 ರನ್ ಮಾತ್ರ ಗಳಿಸಿದ್ದರಿಂದ ಕೊನೆಯ ಎಸೆತದಲ್ಲಿ 7 ರನ್ ಅಗತ್ಯವಿತ್ತು. ಆದರೆ, ಕೇವಲ ಒಂದು ರನ್ ಮಾತ್ರ ಬಂದಿದ್ದರಿಂದ ಯುಎಸ್ 5 ರನ್ ಗೆಲುವಿನೊಂದಿಗೆ ಇತಿಹಾಸ ಬರೆಯಿತು.


Share It

You cannot copy content of this page