ಮಕ್ಕಳ ಮಾರಾಟ, ಭ್ರೂಣ ಹತ್ಯೆ: ಇದೇ ಈ ನಕಲಿ ವೈದ್ಯನ ನಿತ್ಯದ ಕೆಲಸ
ಬೆಳಗಾವಿ : ಮಕ್ಕಳ ಮಾರಾಟದ ಪ್ರಕರಣದಲ್ಲಿ ಬಂಧನವಾಗಿದ್ದ ಡಾಕ್ಟರ್‌ವೊಬ್ಬರು, ತಾವು ಮಕ್ಕಳ ಮಾರಾಟ ಮಾತ್ರವಲ್ಲ, ಭ್ರೂಣ ಹತ್ಯೆಯಲ್ಲೂ ನಾನು ಪಂಟರ್ ಎಂದು ಸಾಭೀತು ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಕ್ಕಳ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿ ಸೆರೆ ಸಿಕ್ಕಿರುವ, ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣ ಹತ್ಯೆ ಮಾಡುತ್ತಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿಯ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಫಾರ್ಮ್ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿವೆ.
ಈ ಭ್ರೂಣಗಳನ್ನು ತಂದು ತೋಟದಲ್ಲಿ ಹೂಳುತ್ತಿದ್ದ ಅಬ್ದುಲ್ ಗಫಾರ್ ಲಾಡಖಾನ್‌ನ ಸಹಾಯಕ ರೋಹಿತ್ ಕುಪ್ಪಸಗೌಡರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೋಹಿತ್ ಹಲವು ವರ್ಷಗಳಿಂದ ನಕಲಿ ವೈದ್ಯನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕೋಣಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ್, ಮೂವರು ಸಿಪಿಐಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಸೇರಿ ಐದು ಜನರ ತಂಡ, ಮದುವೆಯಾಗದೆ ಗರ್ಭಿಣಿಯಾಗುವವರನ್ನು ಟಾರ್ಗೆಟ್ ಮಾಡಿ, ಗರ್ಭಪಾತ ಮಾಡಿಸುತ್ತಿದ್ದರು. ಅದರಲ್ಲಿ ಆರೇಳು ತುಂಬಿದ ಗರ್ಭಿಣಿಯರ ಆಪರೇಷನ್ ಮಾಡಿ, ಮಕ್ಕಳನ್ನು ತಾವೇ ಸಾಕುವುದಾಗಿ ತಿಳಿಸಿ, ಮಗು ರಕ್ಷಣೆ ಮಾಡಿ ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು.
ಇದಕ್ಕೆ ಲಕ್ಷಾಂತರ ಹಣವನ್ನು ಪಡೆಯುತ್ತಿದ್ದರು. ೬೦ ಸಾವಿರದಿಂದ ಒಂದೂವರೆ ಲಕ್ಷ ರೂ. ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳ ಮಾರಾಟ ಜಾಲ ಪತ್ತೆ ಮಾಡಿದ್ದ ಪೊಲೀಸರು, ಇದೀಗ ಆತ ಭ್ರೂಣ ಹತ್ಯೆ ಕೂಡ ಮಾಡಿಸಿರುವ ಕುರುಹುಗಳನ್ನು ಪತ್ತೆ ಮಾಡಿದ್ದಾರೆ.