ಬೆಂಗಳೂರು: ತಮ್ಮ ವಾಹನಗಳಿಗೆ ತಮಗೆ ಇಷ್ಟಬಂದಂತೆ ಪ್ರಖರ ಬೆಳಕು ಬರುವ ಹೆಡ್ ಲೈಟ್ ಅಳವಡಿಸಿಕೊಂಡಿರುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದು, ಕೇಂದ್ರ ಮೋಟಾರು ವಾಹನ ಕಾಯಿದೆಯ ಮಾನದಂಡವಿಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಿದೆ.
ರಾಜ್ಯದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದು, ಕೇಂದ್ರದ ಮೋಟಾರು ವಾಹನ ಕಾಯಿದೆ ಅನ್ವಯವೇ ಎಲ್ಲ ವಾಹನಗಳಿಗೆ ಹೆಡ್ ಲೈಟ್ ಅಳವಡಿಕೆ ಮಾಡಬೇಕು. ಇಲ್ಲವಾದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಹೆಚ್ಚು ಬೆಳಕು ನೀಡುವ ಎಲ್ಇಡಿ ದೀಪಗಳನ್ನು ಅಳವಡಿಸುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ. ಭಾರಿ ವಾಹನಗಳಾದ ಟ್ರಕ್, ಲಾರಿ ಬಸ್ ಗಳ ಹೆಡ್ ಲೈಟ್ ಬೆಳಕಿನಿಂದ ಮುಂದೆ ಬರುವ ವಾಹನಗಳ ಸವಾರರು ಸಂಕಷ್ಟ ಅನುಭವಿಸುತ್ತಾರೆ. ಜತೆಗೆ, ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಜುಲೈನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಇಂತಹ ಅಪಾಯಕಾರಿ ಎಲ್ಇಡಿ ಬಳಕೆ ಮಾಡಿರುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುವ ಸಂಬಂಧ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.