ಆಂಟಿಗುವಾ: 2024ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ಹಂತದ ಗ್ರೂಪ್-1 ರ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾ ಡಕ್ ವರ್ತ್ ಲೂಯಿಸ್ ಪ್ರಕಾರ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಶ್ ಮೊದಲು ಫೀಲ್ಡಿಂಗ್ ಆರಿಸಿಕೊಂಡರು. ಇದರಿಂದ ಮೊದಲು ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಆರಂಭದಲ್ಲೇ ರನ್ ಗಳಿಸದೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದು ತುದಿಯಲ್ಲಿದ್ದ ಓಪನರ್ ಲಿಟನ್ ದಾಸ್ ಜೊತೆ ಸೇರಿ ಶಾಂತೊ 2ನೇ ವಿಕೆಟ್ ಗೆ 56 ರನ್ ಸೇರಿಸಿದರು.
ಲಿಟನ್ ದಾಸ್ 16 ರನ್ ಗಳಿಸಿ ಔಟಾಗುತ್ತಲೇ ಬಾಂಗ್ಲಾದೇಶ ಆಗಾಗ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ರನ್ ವೇಗ ಹೆಚ್ಚಿಸುವ ಶಾಂತೊ ಪ್ರಯತ್ನಕ್ಕೆ ಸಾಥ್ ಸಿಗಲಿಲ್ಲ. ಇಷ್ಟಾದರೂ ಕಡೆಯಲ್ಲಿ ಟೊವಿಡ್ ಹೃದಯ್ 40 ರನ್ ಗಳಿಸಿದ್ದರಿಂದ ಬಾಂಗ್ಲಾದೇಶ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.
ಆಸ್ಟ್ರೇಲಿಯಾ ಪರ ವೇಗದ ಬೌಲರ್ ಪ್ಯಾಟ್ ಕುಮಿನ್ಸ್ 3 ವಿಕೆಟ್ ಹಾಗೂ ಸ್ಪಿನ್ನರ್ ಆಡಂ ಜಂಪಾ 2 ವಿಕೆಟ್ ಪಡೆದರು. ಜೊತೆಗೆ ಮೈಕಲ್ ಸ್ಟಾರ್ಕ್, ಸ್ಟೊಯಿನಸ್ ಮತ್ತು ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದರು.
ಈ ಸಾಧಾರಣ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಡೇವಿಡ್ ಮಿಲ್ಲರ್ ಹಾಗೂ ಟ್ರಾವಿಸ್ ಹೆಡ್ ಅವರ ಬಿರುಸಿನ ಬ್ಯಾಟಿಂಗ್ ನಿಂದ ಸುಲಭ ಗೆಲುವಿನತ್ತ ಸಾಗಿತು.
ಆಸೀಸ್ 65 ರನ್ ಗಳಿಸಿದ್ದಾಗ ಟ್ರಾವಿಸ್ ಹೆಡ್ 31 ರನ್ ಗಳಿಸಿ ಸ್ಪಿನ್ನರ್ ರಿಷದ್ ಹುಸೇನ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಔಟಾದರು. ಬಳಿಕ ಕ್ರೀಸ್ ಗೆ ಬಂದ ಮಿಚೆಲ್ ಮಾರ್ಷ್ ಕೇವಲ 1 ರನ್ ಗಳಿಸಿದ್ದಾಗ ರಿಶದ್ ಹುಸೇನ್ ಬೌಲಿಂಗ್ ನಲ್ಲಿ ಎಲ್.ಬಿ.ಡಬ್ಲ್ಯೂ ಆಗಿ ಔಟಾದರು. ಆದರೆ, ಬಳಿಕ ಕ್ರೀಸ್ ಗೆ ಬಂದ ಮ್ಯಾಕ್ಸ್‌ವೆಲ್ ಜೊತೆಗೆ ಓಪನರ್ ಡೇವಿಡ್ ವಾರ್ನರ್ ಗೆಲುವಿನತ್ತ ಕೊಂಡೊಯ್ದರು.
ಆದರೆ ಆಸ್ಟ್ರೇಲಿಯಾ 11.2 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ತದನಂತರ ಮಳೆ ನಿಲ್ಲದೇ ಸರಿದ ಕಾರಣ ಅಂಪೈರ್ ಗಳು ಆಟ ನಿಲ್ಲಿಸಿ ಡಕ್ ವರ್ತ್ ಲೂಯಿಸ್ ಪದ್ದತಿಯಂತೆ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಿದರು. ಆಸ್ಟ್ರೇಲಿಯಾ ಪರ ಓಪನರ್ ಡೇವಿಡ್ ಮಿಲ್ಲರ್ ಬಿರುಸಿನ 53 ರನ್(35 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.
ಹೀಗೆ ಸೂಪರ್-8 ರ ಗ್ರೂಪ್-2 ರ ಪಂದ್ಯವನ್ನು ಆಸ್ಟ್ರೇಲಿಯಾ ಗೆಲುವು ಸಾಧಿಸಲು ನೆರವಾದರ ವೇಗಿ ಪ್ಯಾಟ್ ಕುಮಿನ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಮುಂದಿನ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ ವಿರುದ್ಧ ಗೆದ್ದರೆ ಸಾಕು ಸೆಮಿಫೈನಲ್ ತಲುಪಲಿದೆ.
