ಬೆಂಗಳೂರು: ಎಐಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೂ, ವಿವಾದಗಳಿಗೂ ಇನ್ನಿಲ್ಲದ ನಂಟು. ಇದೀಗ ಅವರಿಗೆ ಭೂ ಕಬಳಿಕೆ ಆರೋಪವೊಂದು ಮೆತ್ತಿಕೊಂಡಿದೆ.
ಯಲಹಂಕದಲ್ಲಿ ಅಕ್ರಮವಾಗಿ ಜಮೀನು ಖರೀದಿಸಲು ರೋಹಿಣಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಲಿವುಡ್ ಗಾಯಕ ಲಕ್ಕಿ ಆಲಿ ಲೋಕಾಯುಕ್ತದಲ್ಲಿ ದೂರು ನೀಡಿದ್ದು, ದೂರಿನ ಪ್ರತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡಿ.ಕೆ. ರವಿ ಪ್ರಕರಣದಿಂದಲೂ ಸದಾ ಸದ್ದು ಮಾಡುವ ರೋಹಿಣಿ ಸಿಂಧೂರಿ , ನಂತರ ಹಾಸನ ಜಿಲ್ಲಾಧಿಕಾರಿಯಾಗಿ ಸದ್ದು ಮಾಡಿದ್ದರು. ಮೈಸೂರಿನಲ್ಲಿ ಜಿಪಂ ಆಯುಕ್ತೆಯ ಜತೆ ಕಿರಿಕ್ ಮಾಡಿಕೊಂಡಿದ್ದರು. ನಂತರ ಡಿ.ರೂಪಾ ಮತ್ತು ರೋಹಿಣಿ ನಡುವಿನ ಕಿತ್ತಾಟ ಸಿಎಂ ಅಂಗಳ ತಲುಪಿತ್ತು. ಇದೀಗ ಮತ್ತೊಂದು ವಿವಾದ ರೋಹಿಣಿ ಸಿಂಧೂರಿ ಅವರನ್ನು ಸುತ್ತಿಕೊಂಡಿದೆ.
ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ, ಭಾಮೈದ ಮಧುಸೂಧನ್ ರೆಡ್ಡಿ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಯಲಹಂಕ ನ್ಯೂ ಟೌನ್ ವ್ಯಾಪ್ತಿಯ ತಮ್ಮ ಟ್ರಸ್ಟ್ ಗೆ ಸಂಬಂಧಿಸಿದ ಭೂಮಿಯನ್ನು ರೋಹಣಿ ಸಿಂಧೂರಿ ಹಾಗೂ ಮಧುಸೂಧನ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
