ಕೌಶಾಂಬಿ: ಉತ್ತರ ಪ್ರದೇಶ ರಾಜ್ಯದ ಕೌಶಂಬಿಯ ಬಿರ್ನರ್ ಗ್ರಾಮದಲ್ಲಿ 75 ವರ್ಷದ ವೃದ್ಧನೊಬ್ಬನನ್ನು ಗ್ರಾಮ ಪಂಚಾಯತಿ ಅಧ್ಯಕ್ಷನ ನೇತೃತ್ವದಲ್ಲಿಯೇ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ.
ವಯೋವೃದ್ಧ ವ್ಯಕ್ತಿ ಪ್ರೇಮನಾರಾಯಣ ರವಿದಾಸ್ ಎಂಬಾತನಿಗೆ ಅದೇ ಗ್ರಾಮದ ಪಂಚಾಯತಿ ಅಧ್ಯಕ್ಷೆ ಪತಿ ಗುಲಾಬ್ ಚಂದ್ ಗುಪ್ತಾ, ಸುಳ್ಳು ಆರೋಪಗಳನ್ನು ಹೊರಿಸಿ, ಗ್ರಾಮದ ಇತರೆ ಮೇಲ್ಜಾತಿಯ ಜನರೊಂದಿಗೆ ಸೇರಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು.
ದೇಶಾದ್ಯಂತ ಘಟನೆ ಕುರಿತು ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಕೌಶಾಂಬಿ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಸರಾಯಿ ಅಖಿಲ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ದೃಢಪಡಿಸಿದ್ದಾರೆ.
