ಅಪರಾಧ ಸಿನಿಮಾ ಸುದ್ದಿ

ಪೋಷಕರ ಮುಂದೆ ಕಣ್ಣೀರಿಟ್ರಾ ಪವಿತ್ರಾ ಗೌಡ?

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ತನ್ನ ಪೋಷಕರ ಮುಂದೆ ಕಣ್ಣೀರಿಟ್ಟು ತಮ್ಮ ಮಗಳ ಭವಿಷ್ಯ ನೆನೆದು ಗೋಳಾಡಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ದರ್ಶನ್ ಸೇರಿ ನಾಲ್ಕು ಆರೋಪಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಆರೋಪಿಗಳನ್ನು ಗುರುವಾರ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ, ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಅವರನ್ನು ಭೇಟಿಯಾಗಲು ಜೈಲಿಗೆ ಬಂದಿದ್ದು, ಆ ವೇಳೆ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಪವಿತ್ರಾ ಭೇಟಿಗೆ ಅವರ ತಂದೆ, ತಾಯಿ ಮತ್ತು ಚಿಕ್ಕಮ್ಮ ಆಗಮಿಸಿದ್ದು, ಪವಿತ್ರಾ ಭೇಟಿಯಾಗಿ ಧೈರ್ಯ ತುಂಬಿದರು ಎನ್ನಲಾಗಿದೆ. ಈ ವೇಳೆ ತಮ್ಮ ಮಗಳ ಭವಿಷ್ಯವನ್ನು ನೆನೆದ ಪವಿತ್ರಾ ಗೌಡ ತಮ್ಮ ತಂದೆ-ತಾಯಿಯ ಮುಂದೆ ಕಣ್ಣೀರು ಹಾಕಿದ್ದಾರೆ. ಪೋಷಕರು ಪವಿತ್ರಾಗೆ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯ ಜೈಲಿಗೆ ಕಳುಹಿಸುವ ಮುನ್ನ ಪವಿತ್ರಾ ಗೌಡ ಮಗಳು ಮತ್ತು ಆಕೆಯ ತಾಯಿ ನ್ಯಾಯಾಲಯದ ಸಭಾಂಗಣಕ್ಕೆ ಆಗಮಿಸಿದ್ದರು. ಆಗ ಮಗಳ ಜತೆಗೆ ಮಾತನಾಡಲು ಅವಕಾಶವೂ ಸಿಕ್ಕಿರಲಿಲ್ಲ. ವ್ಯಾನ್‌ನಲ್ಲಿ ಕುಳಿತುಕೊಂಡೇ ಮಗಳನ್ನು ನೋಡಿ ಮಾತನಾಡಿಸಿ, ಜೈಲಿಗೆ ತೆರಳಿದ್ದರು ಪವಿತ್ರಾ ಗೌಡ. ಈಗ ಪೋಷಕರು ಜೈಲಿಗೆ ಆಗಮಿಸಿದ್ದು, ಅವರೊಂದಿಗೆ ತಮ್ಮ ಮಗಳ ಭವಿಷ್ಯದ ಕುರಿತು ಪವಿತ್ರಾ ಗೌಡ ಆತಂಕ ವ್ಯಕ್ತಪಡಿಸಿದ್ದು, ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page