ಬೆಂಗಳೂರು: ನಾಲ್ಕನೇ ಮಹಡಿಯ ಟೆರೆಸ್ ಮೇಲಿಂದ ಮಹಿಳೆಯೊಬ್ಬರು ಆಯತಪ್ಪಿ ಬೀಳುವ ಸಂದರ್ಭದಲ್ಲಿ ಆಕೆಯ ಪತಿ, ಕೈ ಹಿಡಿದುಕೊಂಡಿದ್ದರಿಂದ ಅಲ್ಲಿಯೇ ಕೆಲ ಹೊತ್ತು ನೇತಾಡಿದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಡಿ.ಜೆ. ಹಳ್ಳಿಯ ವ್ಯಾಪ್ತಿಯ ಕನಕನಗರದ ನಾಲ್ಕನೇ ಮಹಡಿಯಲ್ಲಿ ಪತಿ ಪತ್ನಿ ನಿಂತಿದ್ದರು. ಆ ವೇಳೆ ಮಹಿಳೆ ರುಬಾಯ್ ಎಂಬುವವರು ಆಯತಪ್ಪಿ ಬಿದ್ದಿದ್ದಾರೆ. ಆಕೆಯ ಪತಿ ತಕ್ಷಣವೇ ಆಕೆಯ ಕೈಹಿಡಿದಿದ್ದಾರೆ. ಆದರೆ, ಮೇಲೆಳೆದುಕೊಳ್ಳಲು ಸಾಧ್ಯವಾಗದ ಕೆಲಕಾಲ ಮಹಿಳೆ ಅಲ್ಲಿಯೇ ನೇತಾಡಿದ್ದಾರೆ. ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಘಟಮೆ ಅರಿವಿಗೆ ಬರುತ್ತಿದ್ದಂತೆ ಸಾರ್ವಜನಿಕರು ಕೂಡಿಕೊಂಡು ಆಕೆಯ ರಕ್ಷಣೆಗಾಗಿ ಬಟ್ಟೆಗಳನ್ನು ಹಿಡಿದು ಪ್ರಯತ್ನ ಮಾಡಿದ್ದಾರೆ. ಕೊನೆಗೂ ಆಕೆ ಆಯತಪ್ಪಿ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸಾರ್ವಜನಿಕರು ಆಕೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
