ಉಪಯುಕ್ತ ಸುದ್ದಿ

ತೈಲ ಬೆಲೆಯೇರಿಕೆ ಹಿನ್ನೆಲೆ: ಶತಕ‌ ದಾಟಿದ ಟೊಮ್ಯಾಟೊ ಬೆಲೆ!

Share It

ಬೆಂಗಳೂರು: ರಾಜ್ಯದಲ್ಲಿ ಯಾವಾಗ ರಾಜ್ಯಸರ್ಕಾರ ದಿಢೀರ್ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿತೋ ಅಂದಿನಿಂದಲೇ ಸಹಜವಾಗಿ ಸಾಗಣಿಕಾ ವೆಚ್ಚ ಹೆಚ್ಚಾಗಿದ್ದರಿಂದ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಅದರಲ್ಲೂ ಟೊಮೆಟೊ ದರ ಕೆಜಿ ಒಂದಕ್ಕೆ ನೂರು ರೂಪಾಯಿ ಗಡಿ ದಾಟಿದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಏರಿಕೆಯಲ್ಲಿದ್ದ ಟೊಮೆಟೋ ದರ ಇದೀಗ ಕೆಜಿ ಒಂದಕ್ಕೆ ನೂರರ ಗಡಿ ದಾಟಿದೆ. ಜೊತೆಗೆ ದುಬಾರಿಯಾಗೇ ಇದ್ದ ದಿನಬಳಕೆಯ ತರಕಾರಿಗಳು, ಸೊಪ್ಪುಗಳ ಬೆಲೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ದುಬಾರಿಯಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಇತ್ತ ರೈತರ ಅದೃಷ್ಟವನ್ನೇ ಟೊಮೆಟೊ ಬದಲಾಯಿಸಿದೆ. ಒಂದು ಎಕರೆ ಟೊಮೆಟೊ ಬೆಳೆದಿರುವವರು ಲಕ್ಷಾಧಿಪತಿಗಳಾಗುತ್ತಿದ್ದಾರೆ. ಹಿಂದೆ ಟೊಮ್ಯಾಟೊ ದರ ಕುಸಿದಾಗ ರೈತರು ಕಂಗಾಲಾಗಿ ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದರು. ಈಗ, ಟೊಮೆಟೊ ಬೆಳೆದ ರೈತರಿಗೆ ಅದೃಷ್ಟಲಕ್ಷ್ಮಿ ಒಲಿದು ಬಂದಂತಾಗಿದೆ. ಆದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಿಲ್ಲರೆ ದರದಲ್ಲಿ ಒಂದು ಕೆ.ಜಿ. ಟೊಮ್ಯಾಟೊಗೆ 100 ರಿಂದ 130 ರೂ.ವರೆಗೆ ಇದೆ.

ತರಕಾರಿ-ದರ(ಕೆಜಿಗೆ):

ಬೆಳ್ಳುಳ್ಳಿ 340

ಟೊಮೆಟೋ 103

ಬೀನ್ಸ್ 224

ಬಿಳಿ ಬದನೆ 100

ಬಜ್ಜಿ ಮೆಣಸಿನಕಾಯಿ 98

ಕ್ಯಾಪ್ಸಿಕಂ 116

ನುಗ್ಗೇಕಾಯಿ 185

ಹೀರೇಕಾಯಿ 100

ಶುಂಠಿ 198

ಮೂಲಂಗಿ 70

ಕೊತ್ತಂಬರಿ 20ರಿಂದ 30 ಒಂದು ಕಟ್

ತಿಂಗಳ ಹಿಂದೆ ಬೆಳೆಗೆ ಹಾಯಿಸಲು ನೀರಿನ ಅಭಾವ, ವಿಪರೀತ ಬಿಸಿಲಿನ ವಾತಾವರಣದಿಂದ ಕೊಳೆಯುತ್ತಿದ್ದ ಕಾರಣದಿಂದ ಈವರೆಗೆ ತರಕಾರಿಗಳ ದರ ಏರಿಕೆಯಾಗಿತ್ತು. ಆದರೆ ಈಗ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ತರಕಾರಿಗಳಿ ಇನ್ನಷ್ಟು ದುಬಾರಿಯಾಗುತ್ತಿದೆ.

ಹೋಟೆಲ್ ಮಾಲೀಕರು ಹಲವು ಅಡುಗೆ, ತಿಂಡಿಗಳಿಗೆ ಟೊಮೆಟೊ ಪೇಸ್ಟ್ ಬಳಸಲು ಮುಂದಾಗಿದ್ದಾರೆ. ಕೆಲವರು ಟೊಮೆಟೊ ಬಳಸುವ ತಿಂಡಿಗಳನ್ನೇ ಕಡಿಮೆ ಮಾಡಿದ್ದಾರೆ. ಸುಮಾರು 20 ರೂ.ಗೆ ಖರೀದಿಸುವ ಟೊಮೆಟೊ ಪೇಸ್ಟ್ ಒಂದು ಕೆ.ಜಿ ಟೊಮೆಟೊ ಬೆಲೆಯಲ್ಲಿ ಐದಾರು ಕೊಂಡುಕೊಳ್ಳಬಹುದು.

ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಟೊಮೆಟೋ ಬೆಲೆ 100 ರೂಪಾಯಿ ದಾಟಿದೆ. ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಕಲಬುರ್ಗಿ ಸೇರಿದಂತೆ ರಾಜ್ಯದೆಲ್ಲೆಡೆ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮೊದಲೇ ತರಕಾರಿಗಳ ಅಭಾವ ಮಾರುಕಟ್ಟೆಯಲ್ಲಿ ಕಾಡುತ್ತಿದೆ.

ಮದುವೆ, ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಿಗೆ, ಹೋಟೆಲ್‌ಗಳಿಂದ ಬೇಡಿಕೆ ಇರುವಷ್ಟು ಪೂರೈಕೆ ಆಗುತ್ತಿಲ್ಲ. ರಾಜ್ಯದಲ್ಲಿ ತರಕಾರಿ ಕೊರತೆ ಉಂಟಾಗಿದ್ದು ಬಟಾಣಿ, ಟೊಮೆಟೋವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.

ಸದ್ಯ ಬೆಂಗಳೂರು ಟೊಮೆಟೋಗೆ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದೆ. ಮಂಡ್ಯ, ಮೈಸೂರು, ಮದ್ದೂರು, ಕನಕಪುರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಟೊಮೆಟೋ ಪ್ರಮಾಣ ಬಹುತೇಕ ಕುಸಿದಿದೆ. ಅಲ್ಲದೆ ಚಿಕ್ಕಮಗಳೂರು, ಕಡೂರು ಕಡೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೋ ಬರುತ್ತಿಲ್ಲ. ಇನ್ನು ರಾಜ್ಯದ ಟೊಮ್ಯಾಟೊ ಕಣಜ ಎನಿಸಿರುವ ಕೋಲಾರದಲ್ಲೂ ಮಳೆ, ರೋಗಬಾಧೆ ಪರಿಣಾಮ ಟೊಮ್ಯಾಟೊ ಪೂರೈಕೆ ಮುಕ್ಕಾಲು ಭಾಗದಷ್ಟು ಕಡಿಮೆಯಾಗಿದೆ.

ಈರುಳ್ಳಿ ದರ ಕೂಡ ಕಳೆದ 2 ವಾರದಿಂದ ಹೊಯ್ದಾಟದಲ್ಲಿದೆ. ಇನ್ನು ಬಜ್ಜಿ ಮೆಣಸಿನಕಾಯಿ, ಬಿಳಿ ಬದನೆ, ನುಗ್ಗಿಕಾಯಿ, ನವಿಲುಕೋಸು ದರವೂ ಏರುಗತಿಯಲ್ಲೇ ಇದೆ. ಬೀನ್ಸ್‌ ಕಳೆದ 15 ದಿನಗಳಿಂದಲೂ 220 ರೂ. ಆಸುಪಾಸಿನಲ್ಲೇ ಇದೆ. ಉಳಿದಂತೆ ಕೊತ್ತಂಬರಿ ಸೊಪ್ಪು ದರ ಒಂದು ಕಂತೆಗೆ 100 ರೂ. ತಲುಪಿದೆ.
ಮೆಂತ್ಯ, ಪಾಲಕ್, ಬಸಳೆ, ಸಬ್ಬಸಗಿ ಸೊಪ್ಪುಗಳೆಲ್ಲಾ ಸಾಮಾನ್ಯ ದಿನಕ್ಕಿಂತ 40ರಿಂದ 70 ರೂ.ವರೆಗೂ ಬೆಲೆ ಹೆಚ್ಚಿಸಿಕೊಂಡಿವೆ.


Share It

You cannot copy content of this page