ಬೆಂಗಳೂರು: ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಕೊಡಬೇಕು ಎನ್ನುವುದು ಇತ್ತೀಚೆಗೆ ಬಂದಿರುವ ಕಾನೂನು. ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ, 2005 ರಿಂದೀಚೆಗೆ ಹೆಣ್ಣುಮಕ್ಕಳಿಗೆ ಈ ಹಕ್ಕು ಸಿಕ್ಕಿದೆ. ಆದರೆ ಇದೇ ಕಾನೂನು ಇದೀಗ ಕೌಟುಂಬಿಕ ವ್ಯವಸ್ಥೆಗೆ ಬಿಕ್ಕಟ್ಟಾಗಿ ಪರಿಗಣಿಸಿದೆ.
ಆಸ್ತಿಗೆ ಸಂಬಂಧಿಸಿದ ಕಾನೂನುಗಳು ರೂಪುಗೊಂಡಿದ್ದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ-ರೂಢಿಗಳ ಆಧಾರದಲ್ಲಿ. ಹೆಣ್ಣುಮಕ್ಕಳಿಗೆ ಆಸ್ತಿ ನೀಡಬೇಕು ಎಂಬ ರೂಢಿಯಾಗಲೀ, ಆಚರಣೆಯಾಗಲೀ ಹಿಂದೂ ಧರ್ಮದಲ್ಲಿ ಈ ಹಿಂದೆ ಇರಲಿಲ್ಲ.
ಆಸ್ತಿಗೆ ಸಂಬಂಧಿಸಿದಂತೆ ನಮ್ಮಲ್ಲಿರುವ ಕಾನೂನುಗಳು ‘ಮಿತಾಕ್ಷರ’ ಮತ್ತು ‘ದಾಯಭಾಗ’ಗಳನ್ನು ಆಧರಿಸಿವೆ. (ಇವುಗಳನ್ನು ಆಧರಿಸಿ ಹಿಂದೂ ಉತ್ತರಾಧಿಕಾರ ಕಾಯ್ದೆ ರೂಪಿಸಲಾಗಿದೆ) ಈ ಇವೆರಡೂ ಗ್ರಂಥಗಳು ಅನುವಂಶಿಕ ಹಕ್ಕುಗಳ ಕುರಿತು ಹೇಳುತ್ತವೆ. ಅದರಂತೆ ಹಿಂದೂಗಳಲ್ಲಿ ಗಂಡು ಮಕ್ಕಳಿಗೆ ಮಾತ್ರ ಆಸ್ತಿ ಹಕ್ಕು ಇದ್ದು, ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕು ಇರಲಿಲ್ಲ. ಇದಕ್ಕೆ ಕಾರಣಗಳೂ ಹಲವಿದ್ದವು. ಪ್ರಮುಖವಾಗಿ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ನಮ್ಮಲ್ಲಿ ಇದ್ದುದರಿಂದ ಮತ್ತು ಈಗಲೂ ಮುಂದುವರೆದಿರುವುದರಿಂದ ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ನೀಡಿರಲಿಲ್ಲ.
ಹಾಗೆಂದು ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸಲಾಗಿತ್ತು ಎಂದಲ್ಲ. ಬದಲಿಗೆ ಪೋಷಕರು ಅಥವಾ ಸೋದರರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ತಮಗಿಂತ ಸುಸ್ಥಿತಿಯಲ್ಲಿರುವ ಅಥವಾ ಉತ್ತಮ ಸ್ಥಿತಿಯಲ್ಲಿರುವ ಮನೆಗೆ ಸೊಸೆಯಾಗಿ ಕಳುಹಿಸುತ್ತಿದ್ದರು. ಹೆಣ್ಣು ಮಕ್ಕಳ ಪೋಷಕರು ಈಗಲೂ ಅದೇ ಧಾಟಿಯಲ್ಲಿ ಆಲೋಚಿಸುತ್ತಾರೆ. ಇದರಾಚೆಗೂ ತಮ್ಮ ಮನೆಯ ಹೆಣ್ಣುಮಕ್ಕಳು ಚೆನ್ನಾಗಿರಲೆಂದು ಆಶಿಸುವ ಪೋಷಕರು ಒಂದಿಷ್ಟು ಚರ ಅಥವಾ ಸ್ಥಿರಾಸ್ಥಿಯನ್ನು ಹೆಣ್ಣುಮಕ್ಕಳಿಗೆ ದಾನ ಅಥವಾ ಉಡುಗೊರೆ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ.
ಕೆಲ ಸಂದರ್ಭಗಳಲ್ಲಿ ಗಂಡನ ಮನೆಯಲ್ಲಿ ಜೀವಿಸಲು ಅಸಾಧ್ಯವಾದಾಗ ಹೆಣ್ಣು ಮಕ್ಕಳು ಸಹಜವಾಗಿ ತವರಿಗೆ ಹಿಂತಿರುಗಿ ಬರುತ್ತಿದ್ದರು. ಇಂತಹ ಹೆಣ್ಣು ಮಕ್ಕಳಿಗೆ ಗಂಡನ ಮನೆಯ ಆಸ್ತಿಯ ಮೇಲಿನ ಹಕ್ಕು ಇಲ್ಲದಿದ್ದುದರಿಂದ ಬದುಕು ತೀರಾ ದುಸ್ತರವಾಗುತ್ತಿತ್ತು. (ಕಾನೂನಿನ ಮೂಲಕ ಗಂಡನಿಂದ ಜೀವನಾಂಶ ಕೇಳುವ ಅವಕಾಶ ಸಿಗುವವರೆಗೂ ನೊಂದ ಹೆಣ್ಣುಮಕ್ಕಳ ಪಾಡು ಹೇಳತೀರದಾಗಿತ್ತು.) ಅನಿವಾರ್ಯವಾಗಿ ತವರು ಸೇರುವ ಇಂತಹ ಹೆಣ್ಣು ಮಕ್ಕಳು ತನ್ನ ತಂದೆಯ ಆಸ್ತಿಯಲ್ಲೂ ಏನೂ ಕೇಳುವಂತಿರಲಿಲ್ಲ. ಕಾರಣ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕು ಇರಲಿಲ್ಲ. ಕೆಲ ಪೋಷಕರು ಅಥವಾ ಸೋದರರು ತಮ್ಮ ಸೋದರಿಯ ಬದುಕು ಚೆನ್ನಾಗಿರಲೆಂದು ಒಂದಿಷ್ಟು ಆಸ್ತಿಯನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು.
ಹಣವೇ ಮುಖ್ಯವೆಂಬ ಮನಸ್ಥಿತಿಗೆ ಜನರು ಹತ್ತಿರವಾದಂತೆ ಇಂತಹ ಹೆಣ್ಣುಮಕ್ಕಳ ಬದುಕು ಶೋಚನೀಯವಾಗತೊಡಗಿತ್ತು. ತಾವು ಹುಟ್ಟಿ ಬೆಳದ ಮನೆಯೇ ಅವರಿಗೆ ಹಂಗಿನ ಮನೆಯಾಗಿ ರೂಪುಗೊಳ್ಳಲಾರಂಭಿಸಿತ್ತು. ಈ ಕಾರಣಕ್ಕೆ ಹಾಗೂ ಗಂಡು ಮತ್ತು ಹೆಣ್ಣು ಮಕ್ಕಳ ನಡುವಿನ ಅಸಮಾನತೆಯನ್ನು ನಿವಾರಣೆ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಆಸ್ತಿ ಹಕ್ಕನ್ನು ಲಿಂಗ ತಾರತಮ್ಯವಿಲ್ಲದಂತೆ ಮಕ್ಕಳ ನಡುವೆ ಸಮಾನವಾಗಿ ನೀಡಿ ಆದೇಶಿಸಿತು. ಅದರಂತೆ ಸಂಸತ್ತು ಕೂಡ ಕಾನೂನು ರೂಪಿಸಿ ಜಾರಿಗೆ ತಂದಿತು.
ಬದಲಾದ ಕಾಲಘಟ್ಟಕ್ಕೆ ಪೂರಕವಾಗಿ ಕಾನೂನು ಬದಲಾವಣೆ ಆಗಿರುವುದರಿಂದ ಇದರಲ್ಲಿ ತಪ್ಪೇನೂ ಇಲ್ಲ. ಆದರೆ ನಮ್ಮದು ಪುರುಷ ಪ್ರಧಾನ ಸಮಾಜವಾದ್ದರಿಂದ ಕೌಟುಂಬಿಕ ಚೌಕಟ್ಟಿನಲ್ಲಿ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪೋಷಕರ ನಿರ್ವಹಣೆ ಹಾಗೂ ಅಂತ್ಯಸಂಸ್ಕಾರದಂತಹ ಜವಾಬ್ದಾರಿಗಳನ್ನು ಕೂಡ ಗಂಡ ಮಕ್ಕಳು ನಿರ್ವಹಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಹೆಣ್ಣು ಮಕ್ಕಳು ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲವಾದರೂ ಇಂತಹ ವಿಚಾರಗಳಲ್ಲಿ ಹೆಣ್ಣು ಮಕ್ಕಳನ್ನು ಹೊರಗಿನವರಾಗಿಯೇ ಕಾಣಲಾಗುತ್ತದೆ. (ಗಂಡು ಮಕ್ಕಳಿಲ್ಲದ ಹಾಗೂ ಹೆಣ್ಣು ಮಕ್ಕಳಷ್ಟೇ ಇರುವ ಕುಟುಂಬಗಳಲ್ಲಿ ಈ ಮನಸ್ಥಿತಿ ಬದಲಾಗುತ್ತಿದೆ.)
ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ನೀಡುವ ವಿಚಾರವಾಗಿ ಅಸಮಾಧಾನ ಹೆಚ್ಚಲು ಕೆಲ ಕಾರಣಗಳಿವೆ. ಮೊದಲನೆಯದು ನಮ್ಮಲ್ಲಿನ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಂದಿರುವ ರೂಢಿ-ಆಚರಣೆಗಳು. ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಇರುವ ಸಮಾಜದಲ್ಲಿ ಹೆಣ್ಣನ್ನು ಮದುವೆ ಮಾಡಿಕೊಡಲಾಗುತ್ತದೆಯೇ ಹೊರತು ಗಂಡನ್ನಲ್ಲ. ಹಾಗೆಯೇ ಹೆಣ್ಣು ಮಕ್ಕಳನ್ನು ಸಾಮಾನ್ಯವಾಗಿ ತಮಗಿಂತ ಸ್ಥಿತಿವಂತರ ಮನೆಗೆ ಮದುವೆ ಮಾಡಿಕೊಡಲಾಗುತ್ತದೆ. ಹೀಗಾಗಿ ಸಹಜವಾಗಿಯೇ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಏಕೆ ಎಂಬ ಪ್ರಶ್ನೆ ಮೂಡುತ್ತದೆ.
ಇನ್ನು ಎರಡನೆಯದಾಗಿ ಆರ್ಥಿಕ ಕಾರಣಗಳು. ಹೆಣ್ಣು ಮಕ್ಕಳ ಮದುವೆ ವೇಳೆ ಪೋಷಕರು ಸಾಮಾನ್ಯವಾಗಿ ಕೊಂಚ ಹೆಚ್ಚೇ ಹಣ ಖರ್ಚು ಮಾಡಿರುತ್ತಾರೆ. ಬೆರಳೆಣಿಕೆ ಪ್ರಕರಣಗಳನ್ನು ಹೊರತುಪಡಿಸಿ ಹೆಣ್ಣು ಮಕ್ಕಳು ತವರು ಮನೆಗಿಂತ ಉತ್ತಮ ಸ್ಥಿತಿಯ ಮನೆಗೇ ಸೇರಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಾಗ ಸಹಜವಾಗಿ ಪೋಷಕರಿಗೂ, ಸೋದರರಿಗೂ ಅಸಮಾಧಾನ ಉಂಟಾಗುತ್ತದೆ. ಕೆಲ ಪ್ರಕರಣಗಳಲ್ಲಿ ಪೋಷಕರು ತಮ್ಮ ಮನೆಯ ಹೆಣ್ಣುಮಕ್ಕಳು ಚೆನ್ನಾಗಿರಬೇಕೆಂದು ನಗರ ಪ್ರದೇಶಗಳಲ್ಲಿನ ಸ್ಥಿತಿವಂತರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಹಾಗಿದ್ದೂ ಕೆಲ ಹೆಣ್ಣು ಮಕ್ಕಳು ಕಾನೂನು ಅವಕಾಶ ಬಳಸಿಕೊಂಡು ತಮ್ಮ ಹಳ್ಳಿಗಳಲ್ಲಿರುವ ಪೋಷಕರು, ಸೋದರರಿಂದ ಆಸ್ತಿ ಕೇಳಿ, ಸಿಗದಿದ್ದಾಗ ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ.
ಹೆಣ್ಣು ಮಕ್ಕಳು ಕಾರಿನಲ್ಲಿ ಹೋಗಿ ದಾವೆ ಹೂಡಿ ಬರುವಾಗ ಇದೇ ದಾವೆಗೆ ಹಾಜರಾಗಲು ದಾರಿ ಖರ್ಚಿಗೂ ದುಡ್ಡಿಲ್ಲದೆ ಸೋದರರು, ಪೋಷಕರು ಪರದಾಡುತ್ತಿರುವ ಪ್ರಕರಣಗಳು ಕಣ್ಮುಂದಿವೆ. ಇಂತಹ ಬೆಳವಣಿಗೆಗಳು ಸಹಜವಾಗಿಯೇ ಹೆಣ್ಣುಮಕ್ಕಳ ಆಸ್ತಿ ವಿಚಾರ ಕುರಿತಂತೆ ಅಸಮಾಧಾನ ಸೃಷ್ಟಿಸುತ್ತವೆ.
2020ರಲ್ಲಿ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸೆಕ್ಷನ್ 63, 79(ಎ) (ಬಿ) (ಸಿ), 80 ಅನ್ನು ಬದಲು ಮಾಡಿ ಕೃಷಿಕರಲ್ಲದವರೂ ಭೂಮಿ ಖರೀದಿಸುವ ಅವಕಾಶ ಮಾಡಿಕೊಟ್ಟಿತು. ಆ ನಂತರ ಕೃಷಿಕರಲ್ಲದ ಹಣವಂತರು ಭೂಮಿ ಖರೀದಿಸುವ ಪ್ರಮಾಣ ಹೆಚ್ಚಾಗಿದ್ದು, ಭೂಮಿಯ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭೂಮಿಯ ಮೌಲ್ಯ ಹೆಚ್ಚಾದಂತೆ ತಂದೆಯ ಆಸ್ತಿಯಲ್ಲಿ ಪಾಲು/ಸಮಪಾಲು ಕೇಳುವ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ.
ಧಾರ್ಮಿಕ ಮತ್ತು ಸಂಸ್ಕೃತಿಕ ರೂಢಿ-ಅಚರಣೆಗಳೇ ಕಾನೂನಿನ ಮೂಲ. ಕಾನೂನು ಜನ್ಮ ತಳೆದಿದ್ದೇ ಇಲ್ಲಿ. ಹೀಗಾಗಿ, ಕಾನೂನನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಬೇಕೇ ಹೊರತು, ಎಲ್ಲಾ ಸಂದರ್ಭಗಳಲ್ಲಿಯೂ ಅಲ್ಲ. ಉದಾಹರಣೆಗೆ, ಕೌಟುಂಬಿಕ ಹಿಂಸೆಗಳಿಂದ ಮಹಿಳೆಯ ರಕ್ಷಣೆ ಕಾಯ್ದೆಯ ನಿಯಮಗಳ ಪ್ರಕಾರ ಗಂಡ ಹೆಂಡತಿಯನ್ನು ಜೋರಾಗಿ ಕಣ್ಣು ಬಿಟ್ಟು ನೋಡುವುದು/ಗುರಾಯಿಸುವುದು ಕೂಡ ಕ್ರೌರ್ಯ. ಇಂತಹ ವಿಚಾರಗಳ ಮೇಲೆ ಕೇಸು ದಾಖಲಿಸುತ್ತಾ ಹೋದರೆ ಇಡೀ ಸಮಾಜವೇ ಕ್ರಿಮಿನಲ್ ಗಳಿಂದ ತುಂಬಿ ಹೋಗುತ್ತದೆ. ಎಲ್ಲದಕ್ಕೂ ಕಾನೂನನ್ನೇ ಬಳಸುತ್ತಾ ಹೋದರೆ ಕೌಟುಂಬಿಕ ವ್ಯವಸ್ಥೆಯೂ ನಾಶವಾಗುತ್ತದೆ, ಸಂಬಂಧಗಳು ಸವಕಲಾಗಿ ಮೌಲ್ಯ ಕಳೆದುಕೊಳ್ಳತ್ತವೆ. ಧರ್ಮ ಮತ್ತು ಸಂಸ್ಕೃತಿಯಿಂದ ಮಾತ್ರವೇ ಸುಸಂಸ್ಕೃತ ಸಮಾಜ ನಿರ್ಮಿಸಬಹುದೇ ವಿನಃ ಕಾನೂನಿನಿಂದಲ್ಲ. (ಧರ್ಮದೊಳಗಿನ ಹುಳುಕುಗಳನ್ನು ಸರಿಪಡಿಸುವುದು ಕೂಡ ಅವಶ್ಯ).
ಆಸ್ತಿ ಸಮಪಾಲು ವಿಚಾರ ಇದೀಗ ಪೋಷಕರನ್ನು ನೋಡಿಕೊಳ್ಳುವ ಮಕ್ಕಳ ಜವಾಬ್ದಾರಿಯ ಮೇಲೂ ಗಂಭೀರ ಪರಿಣಾಮ ಉಂಟುಮಾಡಿದೆ. ಪಾಲು ತೆಗೆದುಕೊಂಡು ಹೋದ ಮೇಲೆ ನಾವೇಕೆ ನೋಡಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ಗಂಡುಮಕ್ಕಳು ಎತ್ತುತ್ತಿದ್ದಾರೆ. ಆದರೆ, ಪೋಷಕರನ್ನು ನೋಡಿಕೊಳ್ಳುವುದು ಧರ್ಮದ ತಳಹದಿಯಲ್ಲಿ ನೈತಿಕ ಕರ್ತವ್ಯ. ನೋಡಿಕೊಳ್ಳಲು ನಿರಾಕರಿಸದ ನಂತರವೇ ಕಾನೂನು ಹುಟ್ಟಿದ್ದು. ಇದೀಗ ಗಂಡು ಮಕ್ಕಳಷ್ಟೇ ಅಲ್ಲ. ಹೆಣ್ಣು ಮಕ್ಕಳು ಮತ್ತವರ ಗಂಡಂದಿರು (ಅಳಿಯಂದಿರು) ಕೂಡ ನೋಡಿಕೊಳ್ಳಬೇಕು. ನೋಡಿಕೊಳ್ಳಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಲಿಕ್ಕೆ ಹಲವು ಕಾಯ್ದೆಗಳಿವೆ. ಜನ್ಮ ನೀಡಿದ ಪೋಷಕರನ್ನು ವೃದ್ಯಾಪ್ಯದಲ್ಲಿ ನೋಡಿಕೊಳ್ಳುವುದು ನೈತಿಕ ಕರ್ತವ್ಯವಾಗಿಯೇ ಉಳಿಯಬೇಕು. ಇಲ್ಲಿ ಕಾನೂನು ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುವಷ್ಟು ಮಾನವೀಯತೆ ಉಳಿಸಿಕೊಳ್ಳಬೇಕು.
ಕಾನೂನಿನ ತಿದ್ದುಪಡಿ ಪ್ರಸ್ತುತ ಕಾಲಘಟ್ಟಕ್ಕೆ ಅವಶ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕಾನೂನನ್ನು ವಿವೇಚನೆಯಿಂದ ಯಾರು, ಹೇಗೆ ಮತ್ತು ಯಾವಾಗ ಬಳಸಿಕೊಳ್ಳಬೇಕು ಎಂಬುದು ಬಹಳ ಮುಖ್ಯ. ಕಾನೂನು ರಕ್ಷಣೆಗೆ ಇರಬೇಕೇ ವಿನಃ ಮತ್ತೊಬ್ಬರ ಶೋಷಣೆಗೆ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಜತೆಗೆ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನೂ ಸುಧಾರಣೆ ಮಾಡಬೇಕಿದ್ದು, ಗಂಡು-ಹೆಣ್ಣು ಮಕ್ಕಳನ್ನು ಸಮನಾಗಿ ಕಾಣುವ ಮನಸ್ಥಿತಿ ರೂಪಿಸಬೇಕು.
ಲೇಖನ: ಮಂಜೇಗೌಡ ಕೆ. ಜಿ, ವಕೀಲರು. 9980178111