ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿ 8 ರ ಬಂಧನ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ ಆರೋಪಿಗಳು ಸಹ ಈಗ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಪವಿತ್ರಾ ಗೌಡ ಸೇರಿ ಇನ್ನು ಕೆಲವರನ್ನು ಜೂನ್ 20 ರಂದು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯ್ತು. ಇಂದು (ಜೂನ್ 22) ದರ್ಶನ್ ಸೇರಿ ಒಟ್ಟು ನಾಲ್ಕು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯ್ತು. ಅಲ್ಲಿಗೆ ಪೊಲೀಸರ ತನಿಖೆಯ ಮೊದಲ ಮತ್ತು ಮಹತ್ವದ ಘಟ್ಟ ಮುಗಿದಿದೆ. ಇದರ ನಡುವೆ ವಕೀಲರ ಕೆಲಸ ಆರಂಭವಾದಂತಿದೆ. ಈಗಾಗಲೇ ಪ್ರಕರಣದ ಆರೋಪಿ ಸಂಖ್ಯೆ 8ರ ಬಂಧನ ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಆರೋಪಿ ಸಂಖ್ಯೆ 8 ರವಿ, ಚಿತ್ರದುರ್ಗದ ಕಾರು ಚಾಲಕನಾಗಿದ್ದು, ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದ ಕಾರನ್ನು ಓಡಿಸಿದ್ದು ಈತನೇ, ಈತನ ಟೊಯೊಟಾ ಇಟಿಯಾಸ್ ಕಾರಿನಲ್ಲಿಯೇ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್​ಗೆ ಕರೆತರಲಾಗಿತ್ತು. ಜೂನ್ 14 ರಂದು ಈತ ಚಿತ್ರದುರ್ಗದಲ್ಲಿ ಪೊಲೀಸರ ಮುಂದೆ ಶರಣಾಗಿದ್ದ. ಇದೀಗ ರವಿ ಬಂಧನದ ವಿರುದ್ಧ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಬಂಧನಕ್ಕೆ ಕಾರಣಗಳನ್ನು ತಿಳಿಸಿಲ್ಲ, ಆರೋಪಿಗೆ ಅಥವಾ ಆರೋಪಿಯ ಪರ ವಕೀಲರಿಗೆ ರಿಮ್ಯಾಂಡ್ ಅರ್ಜಿಯನ್ನು ಸಹ ನೀಡಿಲ್ಲ. ಈ ಪ್ರಕರಣದಲ್ಲಿ ತಾಂತ್ರಿಕ ದೋಷಗಳಿರುವ ಕಾರಣ ಈ ಬಂಧನವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿ ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ದರ್ಶನ್ ಪರ ವಕೀಲ ರಂಗನಾಥ್, ‘ಪ್ರಕರಣದಲ್ಲಿ ಆರೋಪಿ 8ರ ಬಂಧನದ ಬಗ್ಗೆ ಆರೋಪಿಗೆ ಮಾಹಿತಿ ನೀಡಿಲ್ಲ, ಸಾಕಷ್ಟು ಕಾನೂನುಗಳನ್ನು ಪಾಲಿಸಲಾಗಿಲ್ಲ. ಹಾಗಾಗಿ ನಾವು ಬಂಧನ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಒಂದೊಮ್ಮೆ ರಿಟ್ ಅರ್ಜಿಯನ್ನು ಮಾನ್ಯ ಹೈಕೋರ್ಟ್ ಮಾನ್ಯ ಮಾಡಿದರೆ ಅದರಿಂದ ಪ್ರಕರಣದ ಇತರೆ ಆರೋಪಿಗಳಿಗೂ ಒಳಿತಾಗಲಿದೆ. ಅದರ ಪ್ರಭಾವ ಇತರೆ ಆರೋಪಿಗಳ ಬಂಧನದ ಮೇಲೆ ಸಹ ಬೀರಲಿದೆ’ ಎಂದಿದ್ದಾರೆ.

ರಿಟ್ ಅರ್ಜಿ ಸಲ್ಲಿಕೆಗೆ ನ್ಯೂಸ್​ಕ್ಲಿಕ್​ನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪುನರ್ ಉಚ್ಛರಿಸಿದ ದರ್ಶನ್ ಪರ ವಕೀಲ, ಬಂಧನದ ವೇಳೆ ಸೂಕ್ತವಾಗಿ ಕಾನೂನು, ಸಾಂವಿಧಾನಿಕ ನಿಯಮ ಪಾಲಿಸದಿದ್ದರೆ ಆ ಬಂಧನವನ್ನು ರದ್ದು ಮಾಡಬಹುದು, ಈ ಪ್ರಕರಣದಲ್ಲಿಯೂ ಸಾಂವಿಧಾನಿಕ ನಿಯಮ ಪಾಲಿಸದೇ ಇರುವುದು ಗೋಚರವಾಗುತ್ತಿದೆ. ನಮ್ಮ ರಿಟ್ ಅರ್ಜಿಯು ಇನ್ನು ಎರಡು-ಮೂರು ದಿನಗಳಲ್ಲಿ ವಿಚಾರಣೆಗೆ ಬರಬಹುದು ನಮ್ಮ ಅರ್ಜಿಯನ್ನು ಹೈಕೋರ್ಟ್ ಪುರಸ್ಕೃತಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.


Share It

You cannot copy content of this page