ಬೆಂಗಳೂರು/ಹಾಸನ : ಜೆಡಿಎಸ್ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಈಗಾಗಲೇ ಬಂಧನವಾಗಿರುವ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸೂರಜ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಈ ಸಂಬಂಧ ಅವರು ಹಾಸನ ಎಸ್ಪಿ, ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಖುದ್ದು ಸಿಐಡಿ ಕಚೇರಿಗೆ ತೆರಳಿ ಕೇಸ್ ಫೈಲ್ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತನಿಖೆಗೆ ತಯಾರಿ ಮಾಡಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ಸಹ ಸೂಚಿಸಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹಿರಿಯ ಸಹೋದರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಹಾಸನದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್ಪಿಗೂ ದೂರಿನ ಪ್ರತಿಯನ್ನು ಮೇಲ್ ಮಾಡಿದ್ದರು.
ತಮ್ಮ ಆಪ್ತ ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹಾಸನದ ಸೆನ್ ಪೊಲೀಸ್ ಠಾಣೆಗೆ ನಿನ್ನೆ ಶನಿವಾರ ಸಂಜೆ 7.30ಕ್ಕೆ ಬಂದಿದ್ದ ಸೂರಜ್ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಸುದೀರ್ಘ ವಿಚಾರಣೆಗೊಳಪಡಿಸಿದರು. ರಾತ್ರಿ 10 ಗಂಟೆಗೆ ಸೂರಜ್ ರೇವಣ್ಣಗೆ ಊಟ ನೀಡಿದ ಬಳಿಕ ಇಂದು (ಜೂನ್ 23) ಮುಂಜಾನೆ 4 ಗಂಟೆಯವರೆಗೂ ತನಿಖೆ ನಡೆಸಿ ನಂತರ ಮಲಗಲು ವ್ಯವಸ್ಥೆ ಮಾಡಿದ್ದರು. ಇದಾದ ಬಳಿಕ ಇಂದು ಬೆಳಗ್ಗೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದರು.
ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ
ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

