ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಸೋಲು, ರಾಜಕೀಯ ಉತ್ತಂಗದಲ್ಲಿದ್ದ ಡಿ.ಕೆ.ಶಿವಕುಮಾರ್ ಮತ್ತು ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಈ ನಡುವೆ ಇದೀಗ ಡಿಕೆಶಿಯ ಡಿಸಿಎಂ ಸ್ಥಾನದ ಮೇಲೆ ಕಾಂಗ್ರೆಸ್‌ನ ಕೆಲ ನಾಯಕರ ಕಣ್ಣುಗಳು ಬೀಳುತ್ತಿವೆ.
ಬೆಂಗಳೂರು ಗ್ರಾಮಾಂತರದಲ್ಲಿ ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹೀನಾಯ ಸೋಲುಂಡಿದ್ದಾರೆ. ಜತೆಗೆ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕರಾಗಲು ಹೊರಟಿದ್ದ ಡಿಕೆಶಿಗೆ ಇದರಿಂದ ಹಿನ್ನಡೆಯಾಗಿದೆ. ತಮ್ಮ ಸಾಮರ್ಥ್ಯದಿಂದ ಒಂದೂ ಸ್ಥಾನ ಗೆಲ್ಲಿಸಿಲ್ಲ ಎಂಬ ಸ್ಥಿತಿಗೆ ಡಿಕೆಶಿ ಬಂದಿದ್ದಾರೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ಹಳೇ ಮೈಸೂರು ಭಾಗದವರಾಗಿದ್ದರೂ, ಈ ಪ್ರಾಂತ್ಯದಲ್ಲಿ ಕಾಂಗ್ರೆಸ್‌ಗೆ ಅಷ್ಟೇನೂ ಲಾಭವಾಗಿಲ್ಲ. ಹೀಗಾಗಿ, ಡಿಸಿಎಂ ಸ್ಥಾನವನ್ನು ತಮಗೂ ನೀಡಬೇಕು ಎಂದು ಮೂರ್ನಾಲ್ಕು ಮುಖಂಡರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಜಮೀರ್ ಅಹಮದ್ ದನಿ ಎತ್ತಿದ್ದಾರೆ.
ಹಿಂದುಳಿದ ಸಮುದಾಯದ ಮುಖ್ಯಮಂತ್ರಿಯಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿ ಡಿಸಿಎಂ ರಾಜ್ಯದಲ್ಲಿದ್ದಾರೆ. ಹೀಗಾಗಿ, ಒಂದು ಲಿಂಗಾಯತ, ಒಂದು ಅಲ್ಪಸಂಖ್ಯಾತ ಮತ್ತು ಒಬ್ಬ ದಲಿತರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಪಟ್ಟು ಜೋರಗುತ್ತಿದೆ. ಲೋಕಸಭೆ ಚುನಾವಣೆ ಸೋಲಿನ ನಂತರ ಈ ಚರ್ಚೆ ಜೋರಾಗುತ್ತಿದ್ದು, ಒಬ್ಬರೇ ಡಿಸಿಎಂ ಇದ್ದ ಡಿ.ಕೆ. ಶಿವಕುಮಾರ್ ಅವರಿಗೆ ಇದು ಹಿನ್ನಡೆಯಾಗಲಿದೆ.
ಎಸ್.ಸಿ. ಕೋಟಾದಲ್ಲಿ ಸತೀಶ್ ಜಾರಕಿಹೊಳಿ, ಲಿಂಗಾಯತ ಕೋಟಾದಲ್ಲಿ ಎಂ.ಬಿ. ಪಾಟೀಲ್, ಅಲ್ಪಸಂಖ್ಯಾತರ ಕೋಟಾದಲ್ಲಿ ಜಮೀರ್ ಅಹಮದ್ ಆಕಾಂಕ್ಷಿಗಳಿದ್ದು, ಎಐಸಿಸಿ ಕೂಡ ನಾಲ್ವು ಡಿಸಿಎಂ ಮಾಡಲು ಅನುಮತಿ ನೀಡಿದೆ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಏಕಚಕ್ರಾಧಿಪತ್ಯಕ್ಕೆ ಪೆಟ್ಟು ಬೀಳಲಿದೆ.
ಈ ಕುರಿತು ಸಚಿವ ಜಮೀರ್ ಅಹಮದ್ ಮಾತನಾಡಿ, ಮುಸ್ಲಿಂ, ಲಿಂಗಾಯತ, ದಲಿತ ಸಮಾಜಗಳಿಂದಲೂ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇದೆ. ಇದನ್ನು ಪಕ್ಷ ಪೂರೈಸಿದರೆ, ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರಕಾರದಿಂದ ನಿಮಗೆ ಅಗತ್ಯವಾದ ಸಹಾಯ ನೀಡಲು ನೆರವಾಗುತ್ತದೆ ಎಂದಿದ್ದಾರೆ.
“ಒಟ್ಟು 3 ಡಿಸಿಎಂ ಸ್ಥಾನಗಳಿಗೆ ಅಯಾ ಸಮುದಾಯಗಳ ಹಿರಿಯ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಮುಸ್ಲಿಂ ಸಮುದಾಯದಿಂದ ಡಿಸಿಎಂ ಸ್ಥಾನ ಕೇಳಿದ್ದೇವೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ” ಎಂದು ತಿಳಿಸಿದರು.