ತುಮಕೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕೊರಟಗೆರೆ ತಾಲ್ಲೂಕು ಸಂಕೇನಹಳ್ಳಿ(ಐ.ಕೆ.ಕಾಲೋನಿ) ಹಾಗೂ ಬೈರೇನಹಳ್ಳಿ (ತುಂಬಾಡಿ) ಗ್ರಾಮದಲ್ಲಿ ನಿರ್ಮಿಸಿರುವ 66/11ಕೆವಿ ಉಪಸ್ಥಾವರಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಜುಲೈ 1ರಂದು ಸಂಕೇನಹಳ್ಳಿ ಹಾಗೂ ಬೈರೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯುತ್ ಉಪಸ್ಥಾವರಗಳ ಉದ್ಘಾಟನೆ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಉದ್ಘಾಟನೆಗೆ ಸಿದ್ಧವಿರುವ ಸಂಕೇನಹಳ್ಳಿಯ 28ಎಂ.ವಿ.ಎ., ಉಪಸ್ಥಾವರ ಮತ್ತು 9.625 ಕಿ.ಮೀ. ಉದ್ದದ ಹಾಗೂ ಬೈರೇನಹಳ್ಳಿಯ 28 ಎಂ.ವಿ.ಎ., ಉಪಸ್ಥಾವರ ಮತ್ತು 4.462 ಕಿ.ಮೀ. ಉದ್ದದ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮೆಹಮೂದ್ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವಂತೆ ನಿರ್ದೇಶಿಸಿದರು. ಕೊರಟಗೆರೆ ತಹಶೀಲ್ದಾರ್ ಕೆ.ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.