ದ ಗ್ರೇಟ್ ಕೆಎಚ್ ಮುನಿಯಪ್ಪನವರು ತಮ್ಮ ಒಂದು ವರ್ಷದ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಸವಾಲು
ದೇವನಹಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಎನ್ ನಾಗೇಶ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೊಡ್ಡಬಳ್ಳಾಪುರ ಶಾಸಕ ಹಾಗು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮವಾಗಿ ನಡೆದ 187 ಕೋಟಿ ರೂಪಾಯಿ ಹಣ ವರ್ಗಾವಣೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಗರಣದ ಬಗ್ಗೆ ಸಾಕ್ಷಿಗಳಿದ್ದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಈ ಹಗರಣ ನಡೆಯಲು ಸಾಧ್ಯವಿಲ್ಲ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕಾದ ಸರ್ಕಾರ ಅದಕ್ಕೆ ವಿರುದ್ದವಾಗಿ ಹಿಂದುಳಿದ ಸಮುದಾಯವಾಗಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಖಾತೆಯ 187 ಕೋಟಿ ಹಣವನ್ನು ರಾಜಾರೋಷ ವಾಗಿ ಅನುಮಾನಾಸ್ಪದ ಖಾತೆಗಳಿಗೆ ವರ್ಗಾವಣೆ ಮಾಡಿ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಗೆ ಖರ್ಚುಮಾಡಿ ಜನರಿಗೆ ದ್ರೋಹ ಎಸಗಿದೆ ಇದರಿಂದಾಗಿ ಸರ್ಕಾರ ರಾಜ್ಯದ ಜನರ ನಂಬಿಕೆ ಕಳೆದುಕೊಂಡಿದೆ.
ಇಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದರು ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಅಧಿಕಾರದಲ್ಲಿ ಮುಂದುವರಿಯಲು ಈ ಸರ್ಕಾರಕ್ಕೆ ನೈತಿಕತೆ ಇಲ್ಲ ಅದ್ದರಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು, ಎಂದು ಆಗ್ರಹಿಸಿದರು.
ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಮರೆತಿದೆ ಕಳೆದ ಒಂದು ವರ್ಷದಲ್ಲಿ ದೇವನಹಳ್ಳಿ ಸೇರಿದಂತೆ ಯಾವುದೇ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ದೇವನಹಳ್ಳಿ ವಿಧಾನಸಭಾ ಕ್ಷೇತ್ರದದಿಂದ ಗೆದ್ದು ಶಾಸಕರಾಗಿ ಆಹಾರ ಮಂತ್ರಿಯೂ ಆಗಿರುವ ದ ಗ್ರೇಟ್ ಮುನಿಯಪ್ಪನವರು ಕ್ಷೇತ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಸ್ವಾತಂತ್ರ್ಯ ಬಂದ ನಂತರದ ಕಳೆದ 76 ವರ್ಷಗಳಲ್ಲಿ ದೇವನಹಳ್ಳಿಯಿಂದ ಆಯ್ಕೆಯಾದ ಯಾವ ಶಾಸಕರು ಕೂಡ ಇಷ್ಟೊಂದು ನಿಷ್ಕ್ರಿಯರಾಗಿ ನಡೆದುಕೊಂಡಿಲ್ಲ ನನ್ನ 32 ವರ್ಷಗಳ ರಾಜಕಾರಣದಲ್ಲಿ ಇಂತಹ ಕಳಪೆ ಪರಿಸ್ಥಿತಿಯನ್ನು ನಾನು ಕಂಡಿಲ್ಲ ನಾನು ಸೇರಿದಂತೆ ಈ ಹಿಂದಿನ ಶಾಸಕರುಗಳು ಶಾಸಕರಾದ ಮೊದಲ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಮಾಡಿದ್ದರು ಮತ್ತು 35 ವರ್ಷಗಳ ರಾಜಕಾರಣ ಮಾಡಿ ಈಗ ಸಂಪುಟ ದರ್ಜೆಯ ಸಚಿವರು ದೊಡ್ಡ ನಾಯಕರು ಎನಿಸಿಕೊಂಡಿರುವ ದ ಗ್ರೇಟ್ ಕೆಎಚ್ ಮುನಿಯಪ್ಪನವರು ಒಂದು ವರ್ಷ ಒಂದು ತಿಂಗಳಲ್ಲಿ ಅವರು ಯಾವ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆಂದು ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಶಾಸಕರು ಸವಾಲು ಹಾಕಿದರು ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ ಚಂದ್ರಣ್ಣ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಎನ್ ನಾಗೇಶ್, ತಾಲೂಕು ಅಧ್ಯಕ್ಷ ಸುಂದರೇಶ್, ಎಸ್ಟಿ ಮೋರ್ಚಾದ ಮಾಜಿ ಅಧ್ಯಕ್ಷ ತಮ್ಮಯ್ಯ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮುಖಂಡರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.