ಬಾರ್ಬಡೋಸ್: ಹದಿನೇಳು ವರ್ಷದ ನಂತರ ಬಂದ ಟಿ-20 ವಿಶ್ವಕಪ್ ಗೆಲುವು ಭಾರತಕ್ಕೆ ಭಾವುಕ ಕ್ಷಣಗಳನ್ನು ತಂದುಕೊಟ್ಟಿತು. ಅದರಲ್ಲೂ ತಂಡದ ಆಟಗಾರರು ಮೈದಾನದಲ್ಲಿ ಗೆಲುವಿನ ಖುಷಿಯಿಂದ ಕಣ್ಣೀರಿನ ಮೂಲಕ ವಿಜಯವನ್ನು ಸಂಭ್ರಮಿಸಿದರು.
ಭಾರತ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಕಲೆಹಾಕಿದಾಗ ಭಾರತಕ್ಕೆ ಗೆಲುವಿನ ಆಸೆ ಬಹಳಷ್ಟಿತ್ತು. ಆದರೆ, ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಆರ್ಭಟದ ಭಾರತೀಯರನ್ನು ತಣ್ಣಗಾಗಿಸಿತ್ತು. ಹದಿನೇಳು ಓವರ್‌ಗಳ ವರೆಗೆ ಇನ್ನೇನು ಗೆಲುವು ಅಸಾಧ್ಯ ಎಂದು ಟಿವಿ ಆಫ್ ಮಾಡಿದವರೆಷ್ಟು ಜನರೋ? ಆದರೆ, ಅನಂತರ ನಡೆದಿದ್ದು ಪವಾಡ ಎನ್ನಬಹುದು.
ಸೋಲು ಗೆಲುವಿನ ತೂಗುಯ್ಯಾಲೆಯಲ್ಲಿ ಪಂದ್ಯ ಗೆಲ್ಲುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಮಲಗಿ ನೆಲಕ್ಕೆ ಕೈ ಅಪ್ಪಳಿಸಿದರು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸದಾ ಸೈಲೆಂಟ್ ಮೋಡ್ ನಲ್ಲಿರುವ ಕೋಚ್ ರಾಹುಲ್ ದ್ರಾವಿಡ್ ಸಂಭ್ರಮ ಕಣ್ಣಿಗೆ ಹಬ್ಬದಂತಿತ್ತು.
ಕೊನೆಯ ಓವರ್ ಎಸೆದು ಗೆಲುವು ತಂದುಕೊಟ್ಟ ಹಾರ್ದಿಕ್ ಪಾಂಡ್ಯ ಗಳಗಳನೆ ಅತ್ತುಬಿಟ್ಟರು. ಕೋಹ್ಲಿಗೆ ಖುಷಿಯಿಂದ ಕಣ್ಣೀರ ಧಾರೆ ಸುರಿಯುತ್ತಿರಿವುದನ್ನು ಕ್ಯಾಮೆರಾದಿಂದ ಮರೆ ಮಾಚಲು ಸಾಧ್ಯವಾಗಲೇ ಇಲ್ಲ. ಬಹುತೇಕ ಕೊನೆಯ ವಿಶ್ವಕಪ್ ಆಡಿದ ಕೋಹ್ಲಿ, ರೋಹಿತ್ ಭಾವುಕರಾದರೆ, ಮೊದಲ ವಿಶ್ವಕಪ್ ಆಡಿದ ಯುವ ಆಟಗಾರರು, ಗೆಲುವಿನ ಕೇಕೆ ಮತ್ತು ಖುಷಿಯ ಕಣ್ಣೀರಿಗೆ ಸಾಕ್ಷಿಯಾದರು.
ಬಹುತೇಕ ಇದೇ ತಂಢ ಒಂಬತ್ತು ತಿಂಗಳ ಹಿಂದಷ್ಟೇ ಏಕದಿನ ವಿಶ್ವಕಪ್ ಸೋಲು ಕಂಡಿತ್ತು. ಅಂದು ಇಡೀ ಭಾರತೀಯ ಹೃದಯಗಳು ರೋಧಿಸಿದ್ದವು. ಇಂದು ರೋಹಿತ್ ಪಡೆ ಆ ನೋವಿಗೆ ಮುಲಾಮು ಹಚ್ಚಿ, ಗೆಲುವು ತಂದುಕೊಟ್ಟರಾದರೂ, ಭಾವೋದ್ವೇಗದ ಕಣ್ಣೀರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದು ಕಟ್ಟೆಯೊಡೆದು ಖುಷಿಯಿಂದ ಕುಣಿದಾಡುವಂತೆ ಮಾಡಿತ್ತು.
ಇನ್ನೂ, ಕನ್ನಡಿಗ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಕೊನೆಯ ಪಂದ್ಯವಾಗಿತ್ತು. ತನ್ನಿಡಿ ಕ್ರಿಕೆಟ್ ಜೀವನದಲ್ಲಿ ಅದೆಷ್ಟೋ ಅದ್ಭುತ ಗೆಲುವು ತಂದುಕೊಟ್ಟರೂ, ವಿಶ್ವಕಪ್ ಎಂಬುದು ದ್ರಾವಿಡ್ ಪಾಲಿಗೆ ಗಗನಕುಸುಮವೇ ಆಗಿತ್ತು. ಅವರ ಕ್ರಿಕೆಟ್ ಜೀವನ ಅಂತ್ಯವಾಗುವಾಗಲೂ ಸೋಲಿನೊಂದಿಗೆ ವಿದಾಯ ಹೇಳಿದ್ದರು. ಆದರೆ, ತಾವು ಕೋಚ್ ಆಗಿ ಕೊನೆಯ ಪಂದ್ಯದಲ್ಲಿ ಗೆಲುವು ಸಿಕ್ಕ ಖುಷಿ, ಅದು ವಿಶ್ವಕಪ್ ತಂದುಕೊಟ್ಟ ಖುಷಿ ದ್ರಾವಿಡ್ ಅವರೊಳಗಿದ್ದ ಪುಟ್ಟ ಮಗುವಿನ ದರ್ಶನ ಮಾಡಿಸಿತು. ದ್ರಾವಿಡ್ ಸೆಲೆಬ್ರೇಷನ್ ಕ್ರಿಕೆಟ್ ಪ್ರೇಮಿಗಳ ಕಣ್ಣೀರು ಹೆಚ್ಚಿಸಿದ್ದು ಸುಳ್ಳಲ್ಲ.
ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಆಟವಲ್ಲ. ಅದು ಒಂದು ಧರ್ಮ, ಭಾವನಾತ್ಮಕ ಅನುಭೂತಿ. ಆ ಅನುಭೂತಿಗೆ ಇಂತಹ ಮಹಾನ್ ಗೆಲುವುಗಳು ದೊಡ್ಡ ಮಟ್ಟದ ಸಂಭ್ರಮ ತಂದುಕೊಡುತ್ತವೆ. ವಿಶ್ವಕಪ್ ಗೆಲುವು ಭಾರತದ ಬೀದಿಬೀದಿಗಳಲ್ಲಿ ಸಂಭ್ರಮಾಚರಣೆ ನಡೆಯಲು ಕಾರಣವಾಗಿದೆ. ಕ್ರಿಕೆಟ್ ಪ್ರೇಮಿಗಳು ಗೆಲುವಿನ ಗುಂಗಿನಲ್ಲಿ ತೇಲುತ್ತಲೇ ಇದ್ದಾರೆ.