ಬೆಂಗಳೂರು: ಭಾರತ ವಿಶ್ವಕಪ್ ಗೆದ್ದು ಬೀಗುತ್ತಿದೆ. ಅಭಿಮಾನಿಗಳು ದೇಶದ ಬೀದಿಬೀದಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಸೋಲಿನ ದವಡೆಯಲ್ಲಿದ್ದ ಪಂದ್ಯದ ಗತಿ ಬದಲಿಸಿದ್ದು ಆ ಒಂದು ಕ್ಯಾಚ್ !
ಭಾರತ ವಿಶ್ವಕಪ್ ಗೆಲ್ಲಲು ಅನೇಕ ಕಾರಣಗಳಿವೆ. ಆದರೆ, ಗೆಲುವನ್ನು ದಕ್ಷಿಣ ಆಫ್ರಿಕಾ ಕೈಯಿಂದ ಕಸಿದುಕೊಂಡಿದ್ದು ಮಾತ್ರ ಸೂರ್ಯಕುಮಾರ್ ಯಾದವ್ ಹಿಡಿದ ಆ ಒಂದು ಕ್ಯಾಚ್ ಎನ್ನಬಹುದು.
ಅದು ಹತ್ತೊಂಬತ್ತನೆಯ ಓವರ್ ನ ಮೊದಲ ಎಸೆತ. ದಕ್ಷಿಣ ಆಫ್ರಿಕಾ ಗೆಲುವಿಗೆ ಬೇಕಿದ್ದದ್ದು ಕೇವಲ 16 ರನ್ ಮಾತ್ರ. ಕ್ರೀಸಿನಲ್ಲಿದ್ದದ್ದು, ಡೇವಿಡ್ ಮಿಲ್ಲರ್ ಎಂಬ ಕಿಲ್ಲರ್ ಬ್ಯಾಟರ್. ಹೀಗಾಗಿ, ಭಾರತಕ್ಕೆ ಗೆಲುವು ಸುಲಭದ್ದಾಗಿರಲಿಲ್ಲ. ಮಿಲ್ಲರ್ ಇಂತಹ ಅನೇಕ ಪರಿಸ್ಥಿತಿಯಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ, ಪಂದ್ಯ ಗೆಲ್ಲಿಸಿಕೊಟ್ಟ ಇತಿಹಾಸ ಹೊಂದಿದ್ದರು.
ಮಿಲ್ಲರ್ ಹರ್ಷದೀಪ್ ಎಸೆದ ಆ ಓವರ್ ನ ಮೊದಲ ಎಸೆತದಲ್ಲಿಯೇ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಬಾಲು ಗಗನಕ್ಕೆ ಹಾರಿ ಬೌಂಡ್ ಗೆರೆ ದಾಟುವ ಹಂತದಲ್ಲಿತ್ತು. ಲಾಂಗ್ ಆನ್ ನಲ್ಲಿದ್ದ ಸೂರ್ಯಕುಮಾರ್ ಯಾದವ್ ಬೌಂಡರಿ ಗೆರೆಯಾಚೆ ಹಾರಿ ಬಾಲಿಗೆ ಕೈಯೊಡ್ಡಿದರು. ಆದರೆ, ಅವರು ಆಚೆ ಹೋಗಿದ್ದ ಕಾರಣ ಬೌಂಡರಿ ತಡೆದರು ಸಾಕೆಂದು ಚೆಂಡು ಬಿಸಾಕಿ ಬೌಂಡರಿ ಗೆರೆ ದಾಟಿದರು.
ಆದರೆ, ವಾಪಸ್ ಪುಟಿದಿದ್ದ ಚೆಂಡು ಗಾಳಿಯಲ್ಲಿ ಒಂದಷ್ಟು ಕಾಲ ಉಳಿದಿತ್ತು. ಈ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಸೂರ್ಯಕುಮಾರ್, ವಾಪಸ್ ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದರು. ಆಗವರು ಬೌಂಡರಿ ಗೆರೆಯಿಂದ ಒಳಗಿದ್ದರು. ಒಂದು ಕ್ಷಣ ಇಡೀ ಭಾರತ ಎದ್ದು ಕುಣಿದು ಕುಪ್ಪಳಿಸಿತು.
ಆದರೆ, ಅಂಪೈರ್ ಮತ್ತು ಆಫ್ರಿಕಾ ಆಟಗಾರರಿಗೆ ಇಂದು ಕ್ಯಾಚ್ ಎಂದು ನಂಬಲು ಮನಸ್ಸಾಗಲಿಲ್ಲ. ಹೀಗಾಗಿ, ಮಿಲ್ಲರ್ ಮೈದಾನದಿಂದ ಹೊರನಡೆಯದೇ ಮೂರನೇ ಅಂಪೈರ್ ತೀರ್ಪಿಗೆ ಕಾದು ನಿಂತರು. ಸುದೀರ್ಘ ಪರಿಶೀಲನೆ ನಂತರ, ಇದು ಕ್ಯಾಚ್ ಎಂಬ ತೀರ್ಪು ಬಂತು. ಭಾರತ ಕುಣಿದು ಕುಪ್ಪಳಿಸಿತು. ಮಿಲ್ಲರ್ ತಲೆತಗ್ಗಿಸಿ ಹೊರನಡೆದರು. ದಕ್ಷಿಣ ಆಫ್ರಿಕಾ ತಂಡ, ಸೋಲು ಖಚಿತವಾಗಿ ಕಣ್ಣೀರಿಟ್ಟಿತು.