ಬಳಕೆದಾರರಿಲ್ಲದೆ ವ್ಯರ್ಥವಾದ ಸ್ಕೈ ವಾಕ್ / ವಾಹನಗಳ ದಟ್ಟಣೆಯ ನಡುವೆಯೇ ಡಿ ವೈಡರ್ ದಾಟುವ ಸಾಹಸ / ಬ್ಯಾರಿಕೇಟ್ ಅಳವಡಿಕೆಗೆ ಒತ್ತಾಯ/
- ಸಂತೋಷ್ ಇರಕಸಂದ್ರ,
ತುಮಕೂರು: ಸಾರ್ವಜನಿಕರ ಹಣವು ಯೋಜನೆಯ ಹೆಸರಿನಲ್ಲಿ ಅನವಶ್ಯಕವಾಗಿ ಹೇಗೆಲ್ಲ ಖರ್ಚಾಗುತ್ತದೆ ಎನ್ನುವುದಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಎದುರುಗಡೆ ಇರುವ ಸ್ಕೈ ವಾಕ್ ಸಾಕ್ಷಿಯಾಗಿದೆ.
ತುಮಕೂರು ವಿವಿಯ ಮುಂಭಾಗದಲ್ಲಿ ಪಾದಾಚಾರಿಗಳು ರಸ್ತೆಯನ್ನು ದಾಟಲು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸ್ಕೈ ವಾಕ್ ಎಳ್ಳಷ್ಟು ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರಾಗಲಿ ವಿದ್ಯಾರ್ಥಿಗಳಾಗಲಿ, ಯಾರೊಬ್ಬರೂ ಸಹ ಸ್ಕೈ ವಾಕ್ ಬಳಸುವುದಿಲ್ಲ. ಬದಲಿಗೆ ವಾಹನಗಳ ದಟ್ಟಣೆಯ ನಡುವೆಯೇ ರಸ್ತೆಯನ್ನು ದಾಟುತ್ತಿದ್ದಾರೆ. ಪಾದಾಚಾರಿಗಳ ಅಲಭ್ಯತೆಯಿಂದ ಸ್ಕೈ ವಾಕ್ ನ ಮೆಟ್ಟಿಲುಗಳು ತುಕ್ಕು ಹಿಡಿದಿವೆ.
ಹಕ್ಕಿ ಪಕ್ಷಿಗಳಿಗೆ ಆವಾಸ ಸ್ಥಾನವಾಗಿ ಅವುಗಳ ಹಿಕ್ಕೆಯಿಂದ ಸ್ಕೈ ವಾಕ್ ತುಂಬುತ್ತಿದೆ. ಇನ್ನು ಲಿಫ್ಟ್ ಗಳು ಬಳಕೆದಾರರಿಲ್ಲದೆ ನಿಂತಲ್ಲಿಯೇ ನಿಂತಿವೆ. ಸ್ಕೈ ವಾಕ್ ಮೇಲೆ ಸಂಚಾರ ಇಲ್ಲದಿರುವುದರಿಂದ ಪುಂಡ ಯುವಕರು ರಾತ್ರಿ ಹೊತ್ತು ಬೀಡು ಬಿಟ್ಟಿರುತ್ತಾರೆ.
ಗುಟ್ಕಾ, ಸಿಗರೇಟು ಪ್ಯಾಕೆಟ್ಗಳು, ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಇತರ ತ್ಯಾಜ್ಯಗಳು ಸ್ಕೈ ವಾಕ್ ನಲ್ಲಿ ಹರಡಿವೆ. ಸ್ಕೈ ವಾಕ್ ಅನ್ನು ಯಾರೂ ಬಳಸದಿರುವುದರಿಂದ ಪೌರಕಾರ್ಮಿಕರು ಸ್ವಚ್ಛ ಮಾಡಲು ಹೆಚ್ಚು ಗಮನವಹಿಸುತ್ತಿಲ್ಲ.
ಈ ಮುಂಚೆ ವಿವಿಯ ಮುಂಭಾಗದಲ್ಲಿ ವಾಹನ ಸವಾರರಿಗೆಂದು ಯು ಟರ್ನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರಿಂದ ವಾಹನ ದಟ್ಟನೆ ಹೆಚ್ಚಾದ ಕಾರಣ ಯು ಟರ್ನ್ ಅನ್ನು ಬಂದ್ ಮಾಡಲಾಯಿತು. ಮುಚ್ಚಿದ ಯು ಟರ್ನ್ ನಲ್ಲಿಯೇ ಪಾದಚಾರಿಗಳು ನಡೆದುಕೊಂಡು ಹೋಗುತ್ತಿದ್ದಾರೆ.
ಅನೇಕ ಬಾರಿ ವಾಹನಗಳ ದಟ್ಟಣೆಯ ನಡುವೆ ರಸ್ತೆ ದಾಟುವಾಗ ಅಪಘಾತಗಳು ಸಂಭವಿಸಿವೆ. ಕನಿಷ್ಠವೆಂದರೂ ತಿಂಗಳಿಗೆ ಒಂದೆರಡು ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ. ಎಂದು ಸ್ಥಳೀಯರು ಹೇಳುತ್ತಾರೆ. ಆದರೂ ಸ್ಕೈ ವಾಕ್ ನ ಬಳಕೆ ಮಾತ್ರ ಯಾರೂ ಮಾಡುತ್ತಿಲ್ಲ.
ಬ್ಯಾರಿಕೇಟ್ ಅಳವಡಿಕೆ : ಈಗಾಗಲೇ ವಾಹನಗಳು ಸಂಚರಿಸದಂತೆ ಯು ಟರ್ನ ಅನ್ನು ಬಂದ್ ಮಾಡಿರುವ ನಗರ ಪಾಲಿಕೆ ಪಾದಚಾರಿಗಳು ಸಂಚರಿಸದಂತೆ ಬ್ಯಾರಿಕೇಟ್ ಗಳನ್ನು ಅಥವಾ ತಡೆ ಬೇಲಿಯನ್ನು ಹಾಕಬೇಕಾಗಿದೆ. ಆಗ ಮಾತ್ರ ಪಾದಚಾರಿಗಳು ಮನಬಂದಂತೆ ರಸ್ತೆ ದಾಟುವುದಕ್ಕೆ ಕಡಿವಾಣ ಹಾಕಬಹುದಾಗಿದೆ. ವಾಹನ ಸವಾರರಿಗೂ ಸಾರ್ವಜನಿಕರು ರಸ್ತೆದಾಟುವುದು ಬೇಸರವನ್ನು ತರಿಸುತ್ತಿದೆ.
ವಾಹನ ನಿಲುಗಡೆಗೆ ನೆರವು:
ಪಾದಚಾರಿಗಳು ಸ್ಕೈ ವಾಕ್ ನ ಬಳಸದಿದ್ದರೂ, ವಾಹನ ಸವಾರರಿಗೆ ಸ್ಕೈ ವಾಕ್ ಸಹಾಯವಾಗುತ್ತಿದೆ. ಸ್ಕೈ ವಾಕ್ ನ ಕೆಳಗಡೆ ಸದಾ ನೆರಳಿರುವುದರಿಂದ ಬೈಕ್ ಗಳ ಪಾರ್ಕಿಂಗ್ ಗೆ ಸಹಕಾರಿಯಾಗಿದೆ. ಅಲ್ಲದೆ ಜಾಹೀರಾತುದಾರರಿಗೆ ದೊಡ್ಡ ಬ್ಯಾನರ್ ಗಳನ್ನು ಹಾಕಲು ಹಾಗೂ ಪೋಸ್ಟರ್ ಗಳನ್ನು ಅಂಟಿಸಲು ಸಿದ್ಧ ವೇದಿಕೆಯಾಗಿ ಸ್ಕೈ ವಾಕ್ ಮಾರ್ಪಟ್ಟಿದೆ.
ಬಹುತೇಕ ಯಾರೂ ಸಹ ಸ್ಕೈ ವಾಕ್ ಅನ್ನು ಬಳಸುವುದಿಲ್ಲ. ವಾಹನಗಳ ದಟ್ಟಣೆಯ ನಡುವೆಯೇ ರಸ್ತೆ ದಾಟುತ್ತಿರುತ್ತಾರೆ. ಇದು ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಾಗಿ ಅಪಘಾತಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಡಿವೈಡರ್ ಗೆ ತಡೆ ಬೇಲಿ ಹಾಕಬೇಕಿದೆ.
- ಸ್ಥಳೀಯ ಅಂಗಡಿ ಮಾಲೀಕ