ಬೆಂಗಳೂರು: ಹೈದರಾಬಾದ್ ಕರ್ನಾಟಕದ ವಿಶೇಷ ಮೀಸಲಾತಿ ಅನ್ವಯ ಸರಕಾರಿ ನೌಕರರನ್ನು ರಾಜ್ಯದ ಇತರೆ ಭಾಗಕ್ಕೆ ವರ್ಗಾವಣೆ ಮಾಡಬಾರದು ಎಂಬುದೇನು ಕಡ್ಡಾಯವಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರಿ ನೌಕರರ ವರ್ಗಾವಣೆ ಮಾಡುವುದು ಸಹಜ. ಅದೇ ರೀತಿ ಹೈದರಾಬಾದ್ ಕರ್ನಾಟಕದ ಮೀಸಲಾತಿ ಪಡೆದು ನೌಕರಿಗೆ ಸೇರಿದ್ದರು, ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಅಥವಾ ಸೂಕ್ತ ವ್ಯಕ್ತಿ ಲಭ್ಯವಿಲ್ಲದಿರುವ ಸಂದರ್ಭಗಳಲ್ಲಿ ಹೊರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲಾತಿ ಪಡೆದು, ಸಬ್ ರಿಜಿಸ್ಟ್ರಾರ್ ಹುದ್ದೆಗೆ ನೇಮಕವಾಗಿದ್ದ ಶ್ರೀಕಾಂತ್ ಎಂಬುವವರನ್ನು ಹೊರಪ್ರದೇಶಕ್ಕೆ ವರ್ಗಾವಣೆ ಮಾಡಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ಆದೇಶ ಎತ್ತಿಹಿಡಿದಿದ್ದ ಕೆಎಟಿ ಕ್ರಮದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಅನುಶಿವರಾಮನ್ ಮತ್ತು ಅನಂತ ರಾಮನಾಥ್ ಹೆಗಡೆ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ, ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶದ ಪ್ರಕಾರ 2013 ರಲ್ಲಿ ಹೈ- ಕ ಮೀಸಲಾತಿ ಅಡಿ ನೇಮಕವಾದವರನ್ನು ಬೇರೆಡೆಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ ಎಂದು ಅಭಿಪ್ರಾಯಪಟ್ಟಿದೆ.