ನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ಟಿ-20 ವಿಶ್ವಕಪ್ ಗೆದ್ದು ಬೀಗಿದ ಭಾರತ ಕ್ರಿಕೆಟ್ ತಂಡ ಇಂದು ಮುಂಜಾನೆಯೇ ತವರಿಗೆ ಮರಳಿದ್ದು, ಅದ್ದೂರಿಯ ಸ್ವಾಗತ ಕೋರಲಾಗಿದೆ.
ಹವಾಮಾನ ವೈಪರೀತ್ಯದಿಂದ ಭಾರತ ಕ್ರಿಕೆಟ್ ತಂಡ ನಿಗದಿತ ಸಮಯಕ್ಕಿಂತ ತಡವಾಗಿ ಭಾರತಕ್ಕೆ ಆಗಮಿಸಿತು. ವಿಮಾನಗಳ ಹಾರಾಟ ಕಡಿಮೆಯಿದ್ದ ಕಾರಣಕ್ಕೆ ಬಿಸಿಸಿಐ ವಿಶೇಷ ವಿಮಾನದ ಮೂಲಕ ಭಾರತ ತಂಡವನ್ನು ತವರಿಗೆ ಕರೆಸಿಕೊಂಡಿತು.
ಕುಟುಂಬ ಸಮೇತ ಆಗಮಿಸಿದ ಭಾರತ ತಂಡದ ಆಟಗಾರರು, ವಿಶೇಷ ವಿಮಾನದಲ್ಲಿ ವಿಶ್ವಕಪ್ ಜತೆಗೆ ಮಾಡಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಂಚಲನ ಮೂಡಿಸಿವೆ. ವಿಶ್ವಕಪ್‌ನೊಂದಿಗೆ ಆಗಮಿಸಿದ ತಂಡದ ಖುಷಿ ಕಂಡು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ಭಾರತಕ್ಕೆ ಬಂದಿಳಿಯುತ್ತಿದ್ದಂತೆ, ದೆಹಲಿಯ ವಿಮಾನ ನಿಲ್ದಾಣದಲ್ಲಿ ಆಟಗಾರರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಐಟಿಸಿ ಹೋಟೆಲ್‌ನ ಸಿಬ್ಬಂದಿ ಆಟಗಾರರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಸಂಜೆ ನಡೆಯುವ ರೋಡ್ ಶೋ ಮತ್ತು ಕಾರ್ಯಕ್ರಮದಲ್ಲಿ ಭಾರತ ತಂಡ ಮುಂಬೈನಲ್ಲಿ ಭಾಗವಹಿಸಲಿದೆ.
ವಾಂಖೇಡೆ ಕ್ರೀಡಾಂಗಣದಿಂದ ನಾರಿಮನ್ ಹೌಸ್ ಸೇರಿ ಮುಂಬೈನ ಪ್ರಮುಖ ಬೀದಿಗಳಲ್ಲಿ ಭಾರತ ತಂಡದ ರೋಡ್ ಶೋ ನಡೆಯಲಿದೆ. ಈಗಾಗಲೇ, ಬಿಸಿಸಿಐ ಭಾರತ ತಂಡಕ್ಕೆ 125 ಕೋಟಿ ರು. ಬಹುಮಾನ ಘೋಷಣೆ ಮಾಡಿದ್ದು, ಸಂಜೆ ವಿತರಣೆ ಮಾಡಲಾಗುತ್ತದೆ.