ಭದ್ರಾಚಲಂ: ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬ ಮಾತು ಜನಜನಿತ. ಆದರಿಲ್ಲಿ ಎಲ್‌ಕೆಜಿ ಓದುತ್ತಿದ್ದ ಮಗುವಿನ ಪ್ರಾಣಕ್ಕೆ ಪೆನ್ನು ಕಂಟಕವಾಗಿದೆ.
ಆಂದ್ರಪ್ರದೇಶದ ಭದ್ರಾಚಲಂನ ಸುಭಾಷ್ ನಗರದಲ್ಲಿ ನಡೆದಿರುವ ಧಾರುಣ ಘಟನೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ರಿಯಾನ್ಷಿಕಾ ಎಂಬ ಮಗು ಪ್ರಾಣ ಕಳೆದುಕೊಂಡಿದೆ. ಹಠವಾಡುತ್ತಿದ್ದ ಮಗು, ಜಾರಿ ಕೆಳಗೆ ಬಿದ್ದಿದೆ. ಆದರೆ, ಅಲ್ಲೇ ಬಿದ್ದಿದ್ದ ಪೆನ್ನಿನ ಮೇಲೆ ಬಿದ್ದ ಕಾರಣ ಪೆನ್ನು ಮಗುವಿನ ತಲೆಗೆ ಬಲವಾಗಿ ಚುಚ್ಚಿಕೊಂಡಿದೆ.
ಎಳೆಯ ವಯಸ್ಸಿನ ಮಗುವಿನ ತಲೆಗೆ ಚುಚ್ಚಿದ ಪೆನ್ನು ಆಳಕ್ಕೆ ಹೊಕ್ಕಿದ್ದು, ಮೆದುಳಿನವರೆಗೆ ನುಗ್ಗಿದೆ. ತಕ್ಷಣಕ್ಕೆ ಕುಟುಂಬ ಸದಸ್ಯರು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ವೈದ್ಯರ ಸಲಹೆ ಮೇರೆಗೆ ಕಮ್ಮಮ್‌ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರ ಚಿಕಿತ್ಸೆ ನೀಡಿ, ತಲೆಯೊಳಗೆ ಹೊಕ್ಕಿದ್ದ ಪೆನ್ನನ್ನು ತೆಗೆಯಲಾಗಿದೆ. ಇದಾದ ಬಳಿಕ ಮಗುವನ್ನು ೪೮ ಗಂಟೆಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಆದರೆ, ಮಗು ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಮಗು ರಿಯಾನ್ಷಿಕಾ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.