ತುಮಕೂರು : ಕೀಟನಾಶಕ ಮಾರಾಟ ಅಂಗಡಿ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ನೋಂದಾಯಿತವಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.
ಗುಬ್ಬಿ ಪಟ್ಟಣದ ಶ್ರೇಯಾಂತ್ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಇಲಾಖಾ ಪರವಾನಗಿಯಲ್ಲಿ ಅನುಮತಿ ಪಡೆಯದ ಕೀಟನಾಶಕವನ್ನು ದಾಸ್ತಾನು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ವೇಳೆಯಲ್ಲಿ ನೋಂದಾಯಿತವಲ್ಲ ನೈಟ್ರೋಬೆಂಜಿನ್ ಕೀಟನಾಶಕ ದಾಸ್ತಾನಿರುವುದು ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳು ಸುಮಾರು 5520 ರೂ. ಮೌಲ್ಯದ 4,75 ಲೀಟರ್ ನೊಂದಾಯಿತವಲ್ಲದ ಕೀಟನಾಶಕವನ್ನು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಗುಬ್ಬಿ ಸಹಾಯಕ ಕೃಷಿ ನಿರ್ದೇಶಕ ಕಚೇರಿ ತಾಂತ್ರಿಕ ಅಧಿಕಾರಿ ಆನಂದ್ ಎಂ.ಆರ್. ಮತ್ತಿತರರು ಪಾಲ್ಗೊಂಡಿದ್ದರು.
