ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಮೂಲದ ಕೆ.ಜಿ.ಪ್ರತಾಪ್ ಕುಮಾರ್ ನಿನ್ನೆ ಸೋಮವಾರ ಮಧ್ಯಾಹ್ನ 2:30 ರ ಸುಮಾರಿಗೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಮಾರನಹಳ್ಳಿ-ಅರಕೆರೆ ಮಧ್ಯೆ ವಾಹನವೊಂದರಲ್ಲಿ ವಿಷ ಸೇವಿಸಿದ್ದಾರೆ ಎಂಬ ಮಾಹಿತಿ ಮೊದಲು ಮಾವ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಗೊತ್ತಾಗಿದೆ. ಸ್ವತಃ ಪ್ರತಾಪ್ ಕುಮಾರ್ ಅವರೇ ಮೊಬೈಲ್ ಫೋನ್ ಮೂಲಕ ಮಾವ ಬಿ.ಸಿ.ಪಾಟೀಲ್ ಅವರಿಗೆ ಕಾಲ್ ಮಾಡಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತಕ್ಷಣವೇ ಗಾಬರಿಯಾದ ಬಿ.ಸಿ.ಪಾಟೀಲ್ ಅವರು ಪತ್ನಿಯ ತಮ್ಮನೂ ಆಗಿದ್ದ ದೊಡ್ಡ ಮಗಳು ಸೌಮ್ಯಾ ಪತಿ ಪ್ರತಾಪ್ ಕುಮಾರ್ ಅವರನ್ನು ಹೇಗಾದರೂ ಮಾಡಿ ಬದುಕಿಸಲು ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಸ್ಪಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ತಾವೂ ಕೂಡ ದಾವಣಗೆರೆ ಮಾರ್ಗವಾಗಿ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಕಡೆ ಕಾರಿನಲ್ಲಿ ವೇಗವಾಗಿ ಬಿ.ಸಿ.ಪಾಟೀಲ್ ಪ್ರಯಾಣ ಬೆಳೆಸಿದರು. ಇತ್ತ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ತಕ್ಷಣವೇ ಹೊನ್ನಾಳಿ ಠಾಣೆ ಪೊಲೀಸರಿಗೆ ಕರೆ ಮಾಡಿ ಪ್ರತಾಪ್ ಕುಮಾರ್ ಹುಡುಕಲು ಆದೇಶಿಸಿದ್ದಾರೆ. ಆದರೆ ಹೊನ್ನಾಳಿ ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಪ್ರತಾಪ್ ಕುಮಾರ್ ಕೊಮಾರನಹಳ್ಳಿ-ಅರಕೆರೆ ಮಧ್ಯೆ ವಾಹನವೊಂದರಲ್ಲಿ ವಿಷ ಕುಡಿದು ಒದ್ದಾಡುತ್ತಿದ್ದರು. ತಕ್ಷಣವೇ ಪೊಲೀಸರು ಪ್ರತಾಪ್ ಕುಮಾರ್ ನನ್ನು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಹೊನ್ನಾಳಿ ತಾಲ್ಲೂಕು ಆಸ್ಪತ್ರೆ ವೈದ್ಯರು ಪ್ರತಾಪ್ ಈಗಾಗಲೇ ವಿಷ ಸೇವಿಸಿದ್ದರಿಂದ ಪ್ರಾಣಕ್ಕೆ ಅಪಾಯವಿದೆ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ತಕ್ಷಣವೇ ಪ್ರತಾಪ್ ನನ್ನು ಬೇಗನೇ ಹೊತ್ತೊಯ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮೆಗ್ಗಾನ್ ಆಸ್ಪತ್ರೆ ವೈದ್ಯರು ಪ್ರತಾಪ್ ಕುಮಾರ್ ಬದುಕಿ ಉಳಿದಿಲ್ಲ, ಸಾರಿ ಎಂದು ತಿಳಿಸಿದ್ದಾರೆ. ಆಗ ಪ್ರತಾಪ್ ಕುಮಾರ್ ಪಾರ್ಥಿವ ಶರೀರವನ್ನು ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಕಡೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಸಂಬಂಧಿಕರು ಪ್ರತಾಪ್ ಸಾವಿನಿಂದ ಗೊಳೊ ಎಂದು ಅಳಲು ಶುರು ಮಾಡಿದರು.
ಬಲಗೈಯಂತಿದ್ದ ಅಳಿಯನ ಕಳೆದುಕೊಂಡು ಬಿ.ಸಿ.ಪಾಟೀಲ್ ಉಪವಾಸ!
ಇತ್ತ ಮನೆಮಗನಂತಿದ್ದ ದೊಡ್ಡ ಮಗಳು ಸೌಮ್ಯಳ ಪತಿ ಪ್ರತಾಪ್ ಕುಮಾರ್ ಅಕಾಲ ಸಾವಿನಿಂದ ಚೇತರಿಸಿಕೊಳ್ಳಲು ಮಾಜಿ ಸಚಿವ ಬಿ.ಸಿ ಪಾಟೀಲ್ ಅವರಿಗೆ ಬಹಳ ಸಮಯ ಹಿಡಿಯಲಿದೆ. ಈ ಬಗ್ಗೆ ಬಿ.ಸಿ.ಪಾಟೀಲ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಆದರೆ ಅವರ ಮನೋಬಲ ಕುಸಿದಿದೆ. ರಾಜಕೀಯಕ್ಕೆ ಬರುವ ಮೊದಲು ಬಿ.ಸಿ.ಪಾಟೀಲ್ ಅವರು ಹಿರಿಯೂರು ಸೇರಿದಂತೆ ಅನೇಕ ಕಡೆ ಸಬ್ ಇನ್ ಸ್ಪೆಕ್ಟರ್ ಆಗಿ ಒಳ್ಳೆಯ ಹೆಸರು ಹೊಂದಿದ್ದರು. ನಂತರ ಅಣ್ಣ ನಿರ್ಮಾಪಕರಾದ ಬಸಂತ್ ಕುಮಾರ್ ಅವರ ಪ್ರಭಾವದಿಂದಾಗಿ ಬಿ.ಸಿ.ಪಾಟೀಲ್ ಅವರು ಪ್ರೇಮಾ ನಾಯಕಿಯಾಗಿದ್ದ ‘ಕೌರವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಹೊಸ ಹೀರೋ ಆಗಿ ಮಿಂಚಿದರು. ಮುಂದೆ ಪಿಎಸ್ಐ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪ್ರವೇಶಿಸಿ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕರಾದರು. ಮತ್ತೊಂದು ಬಾರಿ ಕಾಂಗ್ರೆಸ್ ಶಾಸಕರಾದರೂ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಇಷ್ಟೆಲ್ಲಾ ಸಾಧನೆ ಮಾಡಲು ಬಿ.ಸಿ.ಪಾಟೀಲ್ ಅವರಿಗೆ ಹೆಂಡತಿ ತಮ್ಮ ಮತ್ತು ದೊಡ್ಡ ಮಗಳು ಸೌಮ್ಯಾಳ ಪತಿ ಕತ್ತಲಗೆರೆಯ ಕೆ.ಜಿ.ಪ್ರತಾಪ್ ಕುಮಾರ್ ಬಲಗೈ ಬಂಟನಂತೆ ಇದ್ದು ಹಿರೇಕೆರೂರಿನ ಹೊಲ, ಗದ್ದೆ, ತೋಟಗಳನ್ನು ನೋಡಿಕೊಂಡು ಮಾವನ ವ್ಯವಹಾರದ ಉಸ್ತುವಾರಿ ವಹಿಸಿಕೊಂಡಿದ್ದ. ಆದರೆ ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ದಿನಾಲೂ ಕುಡಿದು ಪ್ರತಾಪ್ ಕೊರಗುತ್ತಿದ್ದ.
ನಿನ್ನೆ ಆತ್ಮಹತ್ಯೆಯ ಮೂಲಕ ಸಾವಿಗೆ ಶರಣಾದ ಅವರ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ ಅಂತ್ಯಕ್ರಿಯೆ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಾಟೀಲ್ ನಿನ್ನೆ ಮಧ್ಯಾಹ್ನ ಹೇಳಿದ ಮಾತುಗಳನ್ನೇ ಪುನರಾವರ್ತಿಸಿದರು. ಪ್ರತಾಪ್ ಮನೆ ಮಗನಾಗಿ ತಮ್ಮ ಬಲಗೈಯಂತಿದ್ದ ಎಂದ ಪಾಟೀಲ್ ತೋಟ, ಜಮೀನು ಮತ್ತು ಹೊಲಗದ್ದೆಗಳನ್ನು ಅವನೇ ನೋಡಿಕೊಳ್ಳುತ್ತಿದ್ದ ಎಂದರು. ಪಾಟೀಲ್ ಅವರ ರಾಜಕೀಯ ಚಟುವಟಿಕೆಗಳಲ್ಲೂ ಪ್ರತಾಪ್ ನೆರವಾಗುತ್ತಿದ್ದರಂತೆ. ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿದ್ದರಿಂದ ಪ್ರತಾಪ್ ಖಿನ್ನತೆಗೊಳಗಾಗಿದ್ದರು, ಹುಬ್ಭಳ್ಳಿಯಲ್ಲಿ ಸರೋಗೇಸಿ ಮೂಲಕ ಮಗುವನ್ನು ಪಡೆಯುವುದಕ್ಕಾಗಿ ವಕೀಲರ ಜೊತೆ ಮಾತುಕತೆಯೂ ನಡೆಸಿದ್ದರು ಎಂದು ಪಾಟೀಲ್ ಹೇಳಿದರು.
ಇಂದು ಮಂಗಳವಾರ ಮಧ್ಯಾಹ್ನ ಲಿಂಗಾಯತ ಸಂಪ್ರದಾಯದಂತೆ ಚನ್ನಗಿರಿ ತಾಲ್ಲೂಕಿನ ಸ್ವಗ್ರಾಮ ಕತ್ತಲಗೆರೆ ಗ್ರಾಮದಲ್ಲಿ ಪ್ರತಾಪ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಮಾವ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಹೊನ್ನಾಳಿ ಮಾಜಿ ಶಾಸಕ-ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಎಲ್ಲಾ ರಾಜಕೀಯ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ಆದರೆ ಪ್ರತಾಪ್ ಕುಮಾರ್ ಏಕೆ ಸಾವನ್ನಪ್ಪಿದರು? ಎಂಬ ಬಗ್ಗೆ ಇನ್ನೂ ನಮಗೆ ಖಚಿತವಾಗಿ ತಿಳಿದುಬಂದಿಲ್ಲ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಈ ಬಗ್ಗೆ ಮುಂದೆ ತನಿಖೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇತ್ತ ಕತ್ತಲಗೆರೆ ಗ್ರಾಮದಲ್ಲಿ ದುಃಖತಪ್ತ ಸಂಬಂಧಿಕರು ಮತ್ತು ಬಿ.ಸಿ.ಪಾಟೀಲ್ ಕುಟುಂಬದವರು ಪ್ರತಾಪ್ ಕುಮಾರ್ ಅಂತ್ಯಕ್ರಿಯೆಗೆ ಕಂಬನಿ ಮಿಡಿದು ಇಹಲೋಕದಿಂದ ಬೀಳ್ಗೊಡಲು ಮುಂದಾಗಿದ್ದಾರೆ.
