ಬೆಂಗಳೂರು: ನಿರ್ಮಾಪಕ, ಉದ್ಯಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಗೋಶಾಲೆಗಳ ನಿರ್ವಹಣೆಗಾಗಿ ಸುಮಾರು 51 ಲಕ್ಷ ರು. ದಾನ ನೀಡಿದ್ದಾರೆ.
ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಿನಲ್ಲಿ ವಿವಿಧ ಉದ್ಯಮ ನಡೆಸುವ ಮುನ್ನೋತ್ ತಮ್ಮ ಸಾಮಾಜಿಕ ಕಳಕಳಿಯಿಂದಲೇ ಪ್ರಸಿದ್ಧರಾಗಿದ್ದಾರೆ. ಅರಿವು ಚಿತ್ರದ ಮೂಲಕ ಸಿನಿಮಾ ರಂಗದಲ್ಲಿಯೂ ಅವರು ಸಾಮಾಜಿಕ ಕಳಿಕಳಿಯ ಸಿನಿಮಾ ಮೂಲಕ ಗಮನ ಸೆಳೆದರು. ಇದೀಗ ಗೋವುಗಳ ಬಗೆಗಿನ ಅವರ ಕಾಳಜಿ ಗಮನ ಸೆಳೆದಿದೆ.
ದೇಶಿಯ ತಳಿಗಳನ್ನು ರಕ್ಷಣೆ ಮಾಡುವ ಅಭಿಯಾನವನ್ನು ಬಹಳ ವರ್ಷಗಳಿಂದ ಮಾಡುತ್ತಾ ಬಂದಿರುವ ಮುನ್ನೋತ್, ಪ್ರತಿ ವರ್ಷ ಗೋಶಾಲೆಗಳ ನಿರ್ವಹಣೆಗೆ ಲಕ್ಷಾಂತರ ರುಪಾಯಿ ದಾನ ನೀಡುತ್ತಾರೆ. ಈ ವರ್ಷ ಸುಮಾರು 51 ಲಕ್ಷ ರುಪಾಯಿ ಹಣವನ್ನು ಗೋಶಾಲೆಗಳ ನಿರ್ವಹಣೆಗೆ ನೀಡಿರುವುದು ವಿಶೇಷ.
ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ 20 ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸ್ಥರನ್ನು ಆಹ್ವಾನಿಸಿ ಅವರಿಗೆ ಚೆಕ್ ವಿತರಣೆ ಮಾಡಲಾಯಿತು. ಈ ಕಾರ್ಯದಲ್ಲಿ ಅವರ ಪತ್ನಿ ಸುರಕ್ಷಾ ಸೇರಿ ಅವರ ಇಡೀ ಕುಟುಂಬ ಕೈಜೋಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಮುನ್ನೋತ್, ನಾವು ತಾಯಿಯ ಋಣವನ್ನಂತೂ ತೀರಿಸಲು ಸಾಧ್ಯವಿಲ್ಲ. ತಾಯಿಯಂತೆಯೇ ನಮ್ಮನ್ನು ಪೊರೆಯುವುದು ಗೋವುಗಳು. ಹೀಗಾಗಿ, ಗೋವುಗಳ ರಕ್ಷಣೆಗಾಗಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಕಟುಕರ ಕೈಯ್ಯಿಂದ ರಕ್ಷಣೆ ಮಾಡಿದ ಗೋವುಗಳು ಗೋಶಾಲೆಗೆ ಬರುತ್ತವೆ. ಅವುಗಳ ನಿರ್ವಹಣೆಗೆ ಹಣ ಬೇಡವೇ? ಹೀಗಾಗಿ, ಇದು ನನ್ನ ಅಳಿಲು ಸೇವೆ ಎಂದಿದ್ದಾರೆ.
